ಚಿಕ್ಕೋಡಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಆದ್ರೆ, ನಿಪ್ಪಾಣಿ ಪಟ್ಟಣದ ಮುನ್ಸಿಪಲ್ ಆವರಣದಲ್ಲಿ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ಅರಿಶಿನ-ಕುಂಕುಮ ಕಾರ್ಯಕ್ರಮದದಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂಬ ಆರೋಪದ ಮೇರೆಗೆ ಸಚಿವೆ ಶಶಿಕಲಾ ಜೊಲ್ಲೆ ಸೇರಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ಮುನ್ಸಿಪಲ್ ಹೈಸ್ಕೂಲ್ ಆವರಣದಲ್ಲಿ ಶಶಿಕಲಾ ಜೊಲ್ಲೆ ಆಪ್ತರಾಗಿದ್ದ ರಣರಾಗಿಣಿ ಎಂಬುವರು ಅರಿಶಿಣ-ಕುಂಕುಮ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಈ ವೇಳೆ ಸಚಿವೆ ಶಶಿಕಲಾ ಜೊಲ್ಲೆ ಸಹ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಬಿಜೆಪಿ ಧ್ವಜ ಹಾಗೂ ಸಂಸದ ಅಣ್ಣಸಾಬ್ ಜೊಲ್ಲೆ ಭಾವಚಿತ್ರ ಇರುವ ಹಾಡು ಹಾಕಿ ಜನರಿಗೆ ಮನರಂಜನೆ ನೀಡಿದರು. ಕಾರ್ಯಕ್ರಮ ಮುಗಿದ ನಂತರ ನೂರಾರು ಜನರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆಂದು ಆರೋಪಿಸಿ ಚುನಾವಣಾ ಆಯೋಗದ ಅಧಿಕಾರಿಗಳು ಪ್ರಕರಣ ದಾಖಲು ಮಾಡಿದ್ದಾರೆ. ಮಹಿಳಾ ಮಂಡಳದ ಅಧ್ಯಕ್ಷೆ ರಣರಾಗಿಣಿ ಎ1 ಆರೋಪಿಯಾಗಿದ್ದು, ಶಶಿಕಲಾ ಜೊಲ್ಲೆ ಎ2 ಆರೋಪಿ ಎಂದು IPC ಸೆಕ್ಷನ್1860 ರ ಅಡಿ ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್: ಇನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧವೂ ಸಹ ಎಫ್‌ಐಆರ್ ದಾಖಲಾಗಿದೆ. ಗುರುವಾರ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಸ್ವಸಹಾಯ ಗುಂಪುಗಳಿಗೆ ಸರ್ಕಾರದ ಚೆಕ್ ವಿತರಣೆ ಕಾರ್ಯಕ್ರಮ ನಡೆಸಲಾಯಿತು. ಬೆಳಗ್ಗೆ ತಾಲೂಕಿನ ವಿವಿಧ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದರು. ಕೆಲ್ಲೂರು ಗ್ರಾಮದಲ್ಲಿರುವ ತಮ್ಮ ನಿವಾಸಕ್ಕೆ ಎಲ್ಲಾ ಸ್ವಸಹಾಯ ಗುಂಪುಗಳ ಮಹಿಳೆಯರನ್ನು ಶಾಸಕರು ಆಹ್ವಾನಿಸಿದ್ದರು. ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಹ ಅನೇಕ ಜನ ಶಾಸಕರ ನಿವಾಸದಲ್ಲಿ ಸೇರಿದ್ದರು. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಚುನಾವಣಾ ಆಯೋಗದ ತಂಡ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ನೀಡಿ, ಪ್ರಕರಣ ದಾಖಲಿಸಿದೆ.
ಇದನ್ನೂ ಓದಿ : ಇಂದಿನಿಂದ ನೀತಿ ಸಂಹಿತೆ ಜಾರಿ.. ಗಡಿಭಾಗದ ಚೆಕ್ ಪೋಸ್ಟ್ಗಳಲ್ಲಿ ಅಧಿಕಾರಿಗಳು ಅಲರ್ಟ್
ನೀತಿ ಸಂಹಿತೆ ಎಂದರೇನು?: ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗ ಸೂಚಿಸಿದ ನಿಯಮಗಳ ಪಟ್ಟಿ ಇದಾಗಿದೆ. ಅಂದರೆ ಚುನಾವಣೆ ಸಂದರ್ಭದಲ್ಲಿ ಎಲ್ಲಾ ಪಕ್ಷದ ನಾಯಕರು ನೀತಿ ಸಂಹಿತೆ ಪಾಲಿಸಲೇ ಬೇಕಾಗುತ್ತದೆ. ಚುನಾವಣಾ ದಿನಾಂಕ ಘೋಷಿಸಿದ ತಕ್ಷಣ ರಾಜಕಾರಣಿಗಳಿಗೆ ತಕ್ಷಣವೇ ಮಾರ್ಗಸೂಚಿಗಳನ್ನು ನೀಡಲಾಗುತ್ತದೆ. ಚುನಾವಣಾ ಪ್ರಕ್ರಿಯೆಯಲ್ಲಿ ಅವರು ಏನು ಮಾಡಬೇಕು?, ಏನು ಮಾಡಬಾರದು ಎಂದು ತಿಳಿಸಲಾಗುತ್ತದೆ. ಈ ನೀತಿ ಸಂಹಿತೆ ಉಲ್ಲಂಘನೆ ಮಾಡಿದಲ್ಲಿ ಚುನಾವಣಾ ಆಯೋಗದಿಂದ ಕಠಿಣ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ : ನೀತಿ ಸಂಹಿತೆ ಉಲ್ಲಂಘನೆ: ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲು