ಬೆಳಗಾವಿ: ಇಲ್ಲಿನ ಪೀರನವಾಡಿ ಬಳಿಯಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮೈದಾನದಲ್ಲಿ ನಾಳೆಯಿಂದ (ಫೆ. 4ರಿಂದ) 15ರವರೆಗೆ ನಡೆಯುವ ಸೇನಾ ಭರ್ತಿ ನೇಮಕಾತಿ ರ‍್ಯಾಲಿಯಲ್ಲಿ ಅಭ್ಯರ್ಥಿಗಳಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಹಿನ್ನೆಲೆ ನಗರದ ಬೀಮ್ಸ್ ಆಸ್ಪತ್ರೆಗೆ ನೂರಾರು ಯುವಕರು ಜಮಾಯಿಸುತ್ತಿದ್ದು, ಪ್ರತ್ಯೇಕ ವ್ಯವಸ್ಥೆ ಕಲ್ಪಿಸದೆ ಇರೋದಿಂದ್ರ ಸಾಕಷ್ಟು ಯುವಕರು ಸೇನಾ ಭರ್ತಿ ರ‍್ಯಾಲಿಯಿಂದ ವಂಚಿತರಾಗುವ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲಾಡಳಿತ ಅಥವಾ ಸಂಬಂಧಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು ಕೋವಿಡ್ ಟೆಸ್ಟ್ಗೆ ಪ್ರತ್ಯೇಕ, ಸುರಕ್ಷಿತ ವ್ಯವಸ್ಥೆ ಕಲ್ಪಿಸದೇ ಇರುವುದರಿಂದ ಸರದಿ ಸಾಲಿನಲ್ಲಿ ನಿಂತ ಯುವಕರು ಒಬ್ಬರ ಮೇಲೊಬ್ಬರು ಮುಗಿಬೀಳುತ್ತಿದ್ದಾರೆ. ಇದು ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ಒಮ್ಮೆಲೇ ನೂರಾರು ಅಭ್ಯರ್ಥಿಗಳು ಬೀಮ್ಸ್ ಆಸ್ಪತ್ರೆಗೆ ಬಂದಿರುವುದರಿಂದ ಆಸ್ಪತ್ರೆ ಎದುರು ನೂಕುನುಗ್ಗಲು ಉಂಟಾಗುತ್ತಿದೆ.
ಓದಿ: ಪ್ರೀತಿಸಿ ಮದುವೆಯಾಗುವುದಾಗಿ ಹೇಳಿ ಕೈ ಕೊಟ್ಟ ಯುವಕ: ಠಾಣೆ ಮಟ್ಟಿಲೇರಿದ ಯುವತಿ
ಸೇನಾ ಭರ್ತಿ ರ‍್ಯಾಲಿಗೆ ಆಗಮಿಸಿರುವ ಯುವಕರು ಹೇಳುವಂತೆ, ಬೆಳ್ಳಂಬೆಳಗ್ಗೆ 6 ಗಂಟೆಯಿಂದ ಕ್ಯೂನಲ್ಲಿ ನಿಂತಿದ್ದೇವೆ. ಇನ್ನೂ ಪ್ರೊಸೀಜರ್ ಮುಗಿದಿಲ್ಲ. ಒಪಿಡಿಯಲ್ಲಿ ಇನ್ನೂ ಎರಡು ಕಡೆ ಟೆಸ್ಟ್ ಇದೆ. ಎರಡು ದಿನಗಳಾಯ್ತು, ಕ್ಯೂನಲ್ಲಿ ನಿಂತರೂ ನಮಗೆ ಅವಕಾಶ ಸಿಗುತ್ತಿಲ್ಲ. ಒಂದು ವೇಳೆ ಟೆಸ್ಟ್ ಮಾಡಿಸಿಕೊಂಡರೂ ನಾಲ್ಕು ದಿನಗಳ ಬಳಿಕ ಕೊರೊನಾ ಪ್ರಮಾಣಪತ್ರ ನೀಡುತ್ತಿದ್ದಾರೆ. ಇದರಿಂದ ನಾವು ಸೇನಾ ಭರ್ತಿ ರ‍್ಯಾಲಿಯಿಂದ ಅವಕಾಶ ವಂಚಿತರಾಗುವ ಭಯ ನಮ್ಮನ್ನು ಕಾಡುತ್ತಿದೆ. ಹೀಗಾಗಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಪ್ರತ್ಯೇಕ ವ್ಯವಸ್ಥೆ ಜೊತೆಗೆ ಕೋವಿಡ್‍ನಂತಹ ರೋಗದ ಪರೀಕ್ಷೆ ಮಾಡುವಾಗ ಸರದಿ ಸಾಲಿನಲ್ಲಿ ಸುರಕ್ಷತೆ ಕಲ್ಪಿಸಬೇಕಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.