ಬೆಳಗಾವಿ: ರಾಜ್ಯದಲ್ಲಿ ನಡೆಯುತ್ತಿರುವ ಗ್ರಾ.ಪಂ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ತಾತ್ಕಾಲಿಕ ತಡೆ ನೀಡಲಾಗಿದೆ. ಡಿಸೆಂಬರ್ ಅಂತ್ಯದೊಳಗಾಗಿ ಸಂಪುಟ ವಿಸ್ತರಣೆ ಆಗಬಹುದು ಎಂದು ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತಿ ಶೀಘ್ರದಲ್ಲಿ ಸಂಪುಟ ವಿಸ್ತರಣೆ ಆಗುವ ಆಶಾ ಭಾವನೆ ಇದೆ ಎಂದರು.
ವಿಧಾನ ಪರಿಷತ್ನಲ್ಲಿ ಸದಸ್ಯರ ಗಲಾಟೆ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ಪರಿಷತ್ತಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಇಲ್ಲ ಎಂಬುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ಪ್ರತಾಪಚಂದ್ರ ಶೆಟ್ಟಿ ಬಹಳ ಒಳ್ಳೆಯ ಮನುಷ್ಯ. ಪಕ್ಷಕ್ಕೋಸ್ಕರ ತಮ್ಮ ವ್ಯಕ್ತಿತ್ವ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪ್ರತಾಪಚಂದ್ರ ಶೆಟ್ಟಿ ರಾಜೀನಾಮೆ ನೀಡಿ ತಮ್ಮ ವ್ಯಕ್ತಿತ್ವ ಉಳಿಸಿಕೊಳ್ಳೋದು ಒಳ್ಳೆಯದು. ಮಾಧ್ಯಮಗಳ ಮೂಲಕ ಪ್ರತಾಪಚಂದ್ರ ಶೆಟ್ಟಿಗೆ ಮನವಿ ಮಾಡುತ್ತೇನೆ ಎಂದರು.
ಓದಿ : ನಾನು ನಾಯಕ ಅಲ್ಲ, ಹೀಗೆ ಎಲ್ಲೂ ಹೇಳಿಲ್ಲ: ಸಚಿವ ರಮೇಶ್ ಜಾರಕಿಹೊಳಿ
ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಗ್ಗೆ ವರಿಷ್ಠರಿಂದ ನಿರ್ಣಯಿಸುತ್ತಾರೆ. ಯಾರಿಗೆ ಟಿಕೆಟ್ ಕೊಡ್ತಾರೋ ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದರು.
ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕೆಂಬ ವಿಚಾರವಾಗಿ ಮಾತನಾಡಿದ ಅವರು, ಚಿಕ್ಕೋಡಿ, ಗೋಕಾಕ್ ಎರಡು ಜಿಲ್ಲೆ ಆಗಬೇಕು ಅಂತಾ ನಮ್ಮದೂ ಆಗ್ರಹವಿದೆ. ಅದಕ್ಕೂ ಪೂರ್ವದಲ್ಲಿ ತಾಲೂಕುಗಳ ವಿಂಗಡನೆ ಆಗಬೇಕು. ತಾಲೂಕುಗಳ ವಿಂಗಡಣೆ ಆಗಿ ಜಿಲ್ಲಾ ವಿಭಜನೆ ಮಾಡಬೇಕು. ಕಳೆದ ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಈ ರೀತಿ ಚರ್ಚೆ ಆಗಿತ್ತು. ಗೋಕಾಕ್, ಚಿಕ್ಕೋಡಿ ಎರಡೂ ಜಿಲ್ಲೆ ಆಗಬೇಕು ಎಂಬುದಕ್ಕೆ ನನ್ನ ಸಹಮತ ಇದೆ. ಕುಟುಂಬ ವಿಚಾರ ಬಂದಾಗ ನಾವೆಲ್ಲ ಸಹೋದರರೂ ಒಂದೇ ಆಗುತ್ತೇವೆ. ಸದ್ಯಕ್ಕೆ ನಮ್ಮ ಪುತ್ರರು ರಾಜಕಾರಣಕ್ಕೆ ಬರಲ್ಲ, ಮುಂದೇ ನೋಡೋಣ ಎಂದರು.