ಅಥಣಿ:ಉಪ ಚುನಾವಣೆ ಘೋಷಣೆ ಬೆನ್ನಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ನ ಆಕಾಂಕ್ಷಿಗಳು ಬಿ ಫಾರ್ಮ್ ಪಡೆಯಲು ರಾಜಕೀಯ ನಾಯಕರ ಮನೆ ಬಾಗಿಲಿಗೆ ಎಡತಾಕಲು ಆರಂಭಿಸಿದ್ದಾರೆ. ಅಥಣಿ ಕ್ಷೇತ್ರದ ಉಪ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರುತ್ತಿವೆ.
ಅಥಣಿ ಕ್ಷೇತ್ರದ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಯಾರೆಂಬುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಬಿಜೆಪಿಯಿಂದ ಲಕ್ಷ್ಮಣ್ ಸವದಿ ಕಣಕ್ಕಿಳಿಯದಿದ್ದರೆ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಪ್ರಬಲ ಆಕಾಂಕ್ಷಿಯಾಗಲಿದ್ದಾರೆ. ಸೆಪ್ಟಂಬರ್ 23ರಂದು ಅನರ್ಹ ಶಾಸಕರು ಚುನಾವಣೆಗೆ ನಿಲ್ಲದಂತೆ ಕೋರ್ಟ್ ಆದೇಶ ನೀಡಿದರೆ ಅವರ ತಮ್ಮ ಮುರುಗೇಶ್ ಕುಮಟಳ್ಳಿ ನಿಲ್ಲುವ ಸಾಧ್ಯತೆ ಇದೆ. ಕಾಂಗ್ರೆಸ್ ವಿಚಾರಕ್ಕೆ ಬರುವುದಾದರೆ ಮಾಜಿ ಸಚಿವ ಎಂ ಬಿ ಪಾಟೀಲ್ ಅವರ ತಮ್ಮ ಸುನೀಲ್‌ಗೌಡ ಪಾಟೀಲ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅಥಣಿಯಲ್ಲಿ ವಕೀಲ ವೃತ್ತಿಯಿಂದ ಗುರುತಿಸಿಕೊಂಡಿರುವ ಎಲ್ ಡಿ ಹಳಿಂಗಳಿ ಅವರು ಇದೇ ರೇಸ್ನಲ್ಲಿದ್ದಾರೆ.
ಕಾಂಗ್ರೆಸ್ ಮುಖಂಡರಾದ ಗಜಾನನ ಮಂಗಸೂಳಿ ಮತ್ತು ಎಸ್ ಎಲ್ ಬೂಟಾಳೆ, ಸತ್ಯಪ್ಪ ಭಾಗ್ಯನವರ ಇವರೆಲ್ಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್ ಈ ಕ್ಷೇತ್ರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ. ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಮಣೆ ಹಾಕ್ತಾರೆ ಎಂಬುದು ಕಾದು ನೋಡಬೇಕಿದೆ.