ಬೆಳಗಾವಿ/ಚಿಕ್ಕೋಡಿ: ಕೋವಿಡ್ ನಿಯಂತ್ರಣಕ್ಕಾಗಿ ಸ್ಥಗಿತಗೊಂಡಿದ್ದ ಸಾರಿಗೆ ಸೇವೆ ಇಂದು ಪುನರಾರಂಭಗೊಂಡಿದೆ. ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜನತಾ ಕರ್ಪ್ಯೂ ಜಾರಿಗೊಳಿಸಿದ್ದರಿಂದ ಸಾರಿಗೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.
ಇದೀಗ ಎರಡನೇ ಹಂತದಲ್ಲಿ ಬೆಳಗಾವಿಯನ್ನು ಅನ್ಲಾಕ್ ಮಾಡಲಾಗಿದೆ. ಹೀಗಾಗಿ 54 ದಿನಗಳಿಂದ ಬಂದ್ ಆಗಿದ್ದ ಬಳಿಕ ಬಸ್ ಸಂಚಾರವನ್ನು ಮತ್ತೆ ಆರಂಭಿಸಲಾಗಿದೆ.
ಸರ್ಕಾರದ ಮಾರ್ಗಸೂಚಿಯಂತೆ ಶೇ. 50 ರಷ್ಟು ಪ್ರಯಾಣಿಕರಿಗೆ ಪ್ರತಿ ಬಸ್ನಲ್ಲಿ ಅವಕಾಶ ನೀಡಲಾಗುತ್ತಿದೆ. ಪ್ರತಿ ಘಟಕದಿಂದ ಪ್ರತಿ ಮಾರ್ಗಕ್ಕೆ 5 ಬಸ್ ಗಳನ್ನು ಬಿಡಲಾಗುತ್ತಿದೆ. ಮೊದಲ ದಿನ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ಥಳೀಯವಾಗಿ ಬಸ್ ಸೇವೆ ಸಂಜೆ 5 ರವರೆಗೆ ಇರಲಿದ್ದು, ದೂರದ ಊರಿಗೆ ತೆರಳುವ ಬಸ್‌ಗಳ ಸೇವೆ ಸಂಜೆ 7 ರವರೆಗೆ ಇರಲಿದೆ.
ಪ್ರತಿ ದಿನ ಬಸ್ಗಳನ್ನು ಹಾಗೂ ಬಸ್ ನಿಲ್ದಾಣ ಸ್ಯಾನಿಟೈಸರ್ ಮಾಡಲು ನಿರ್ಧರಿಸಲಾಗಿದೆ. ಅಲ್ಲದೇ ಆರೋಗ್ಯವಂತ ಎಲ್ಲ ಸಿಬ್ಬಂದಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಅಂತರ್ರಾಜ್ಯ ಬಸ್ ಸೇವೆ ಆರಂಭವಾಗಲಿದೆ. 54 ದಿನಗಳಲ್ಲಿ ಬೆಳಗಾವಿ ವಿಭಾಗಕ್ಕೆ 56 ಕೋಟಿ ರೂ. ನಷ್ಟವಾಗಿದೆ ಎಂದು ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಸದಾಶಿವ ಮುಂಜಿ ಮಾಹಿತಿ ನೀಡಿದ್ದಾರೆ.
ಗಡಿಯಲ್ಲಿ ಪ್ರಾರಂಭವಾದ ಬಸ್ ಸಂಚಾರ:
ಲಾಕ್‌ಡೌನ್ ಸಡಿಲಿಕೆ ನಂತರ ಚಿಕ್ಕೋಡಿಯಲ್ಲಿ ಬಸ್ ಸಂಚಾರ ಮತ್ತೆ ಶುರುವಾಗಿದೆ. ಚಿಕ್ಕೋಡಿ ಉಪವಿಭಾಗದಲ್ಲಿ 30% ಬಸ್‌ಗಳು ಪ್ರತಿ ಜಿಲ್ಲೆಗೆ ಸಂಪರ್ಕ ಕಲ್ಪಿಸಲಿದ್ದು, ಚಿಕ್ಕೋಡಿಯಿಂದ ಮಹಾರಾಷ್ಟ್ರದ ಸಾಂಗಲಿ ಮತ್ತು ಮಿರಜ್ ನಗರಗಳಿಗೆ ಮಾತ್ರ ಬಸ್ ಸಂಚಾರ ನಡೆಸುತ್ತಿವೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಅಗತ್ಯ ಬಿದ್ದರೆ ಹೆಚ್ಚಿನ ಬಸ್‌ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಚಿಕ್ಕೋಡಿ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ಬಿ.ಎಂ ಮಾಹಿತಿ ನೀಡಿದರು.