ಅಥಣಿ: ಕಳೆದ ಐದು ದಿನಗಳಿಂದ ರಾಜ್ಯ ಸಾರಿಗೆ ನೌಕರರು ಆರನೇ ವೇತನ ಆಯೋಗ ರಚನೆ ಮಾಡಬೇಕೆಂದು ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮಧ್ಯೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ತವರೂರು ಅಥಣಿಯಲ್ಲಿ ಬಸ್ ಸಂಚಾರ ಪ್ರಾರಂಭಿಸಲಾಗಿದೆ.
ಅಥಣಿ ಘಟಕದಿಂದ ನಿನ್ನೆಯಿಂದ ಬಸ್ ಸೇವೆ ಒದಗಿಸಲಾಗುತ್ತಿದೆ. ಇವತ್ತು ಮುಂಜಾನೆಯಿಂದಲೇ ಅಂತಾರಾಜ್ಯ ಬಸ್ ಸಂಚಾರ ಶುರುವಾಗಿದೆ. ಯುಗಾದಿ ಹಬ್ಬದ ಪ್ರಯುಕ್ತ ಉತ್ತರ ಕರ್ನಾಟಕ ಭಾಗದ ಜನರು ತೆಲಂಗಾಣ ರಾಜ್ಯದ ಶ್ರೀಶೈಲಂನಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಹೋಗುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ಅಥಣಿ ಬಸ್ ನಿಲ್ದಾಣದಿಂದ ಶ್ರೀಶೈಲಂಗೆ 4 ವಿಶೇಷ ಬಸ್‌ಗಳ ಸಂಚಾರ ಆರಂಭಿಸಲಾಗಿದೆ.
ಅಥಣಿ ಘಟಕದಲ್ಲಿ ಚಾಲಕರು, ನಿರ್ವಾಹಕರು ಹಾಗೂ ಬಸ್ ದುರಸ್ತಿ ಕಾರ್ಮಿಕರು ಸೇರಿ ಒಟ್ಟು 399 ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೇಲಧಿಕಾರಿಗಳ ಒತ್ತಡವಿಲ್ಲದೆ ನಾವು ಕೆಲಸಕ್ಕೆ ಮರಳಿದ್ದೇವೆ ಎಂದು ಚಾಲಕ ರವೀಂದ್ರ ಜೋಶಿ ತಿಳಿಸಿದರು.
ಲಕ್ಷ್ಮಣ ಸವದಿ ಪ್ರತಿನಿಧಿಸುವ ಕ್ಷೇತ್ರ ಅಥಣಿ ಘಟಕದಿಂದ ವಿವಿಧ ಭಾಗಗಳಿಗೆ ನಿನ್ನೆ ಮೂವತ್ತು ಬಸ್‌ಗಳು ಸಂಚಾರ ಮಾಡಿದ್ದು, ಇವತ್ತು ಐವತ್ತು ಬಸ್ ಸಂಚಾರ ಮಾಡಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.