ಬೆಳಗಾವಿ: ಜಿಲ್ಲೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಇದು ಜನ ಆತಂಕಕ್ಕೊಳಗಾಗುವಂತೆ ಮಾಡಿದೆ. ಬನದ ಹುಣ್ಣಿಮೆ ಪ್ರಯುಕ್ತ ಸವದತ್ತಿಯ ಶ್ರೀರೇಣುಕಾದೇವಿ ಜಾತ್ರೆ ಅದ್ದೂರಿಯಾಗಿ ನಡೆಯುತ್ತಿದೆ. ಜಾತ್ರೆಗೆಂದು ತೆರಳುವ ಭಕ್ತರ ಮನೆಗಳನ್ನೇ ಖದೀಮರು ಟಾರ್ಗೆಟ್ ಮಾಡುತ್ತಿರುವುದು ಆತಂಕ ಹೆಚ್ಚುವಂತೆ ಮಾಡಿದೆ.
ತಾಲೂಕಿನ ಮುತಗಾ ಗ್ರಾಮದ ದೀಪಕ ಹಡಪದ ಎಂಬುವರದೂ ಸೇರಿ ಮೂರು ಮನೆ ಕಳ್ಳತನವಾಗಿವೆ. ಕಳ್ಳತನಕ್ಕೆ ಬಂದಿದ್ದ ಖದೀಮರ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮವೊಂದರಲ್ಲಿ 3 ಮನೆಗಳಲ್ಲಿ ಕಳ್ಳತನವಾಗಿದೆ. ಮಚ್ಚೆ ಗ್ರಾಮದ ಸೈನಿಕನೋರ್ವನ ಮನೆಯಲ್ಲಿ 7 ಸಾವಿರ ನಗದು ಜತೆಗೆ ಮದ್ಯದ ಬಾಟಲಿಗಳನ್ನು ದುಷ್ಕರ್ಮಿಗಳು ಎಗರಿಸಿ ಪರಾರಿಯಾಗಿದ್ದಾರೆ.
ಮೊನ್ನೆಯಷ್ಟೇ ಹಿಂಡಲಗಾದಲ್ಲೂ ಮೂರು ಮನೆಗಳಲ್ಲಿ ಕಳ್ಳತನವಾಗಿತ್ತು. ಮನೆಗೆ ಬೀಗ ಹಾಕಿ ಸವದತ್ತಿ ಯಲ್ಲಮ್ಮ ಜಾತ್ರೆಗೆ ಕುಟುಂಬಸ್ಥರು ತೆರಳಿದ್ದರು. ಎರಡು ಮನೆಗೆ ಕನ್ನ ಹಾಕಿ 3ನೇ ಮನೆಗೆ ಕಳ್ಳರು ನುಗ್ಗುವ ವೇಳೆ ಎಸ್ಕೇಪ್ ಆಗುವ ಭರದಲ್ಲಿ, ಮನೆಯ ಛಾವಣಿ ಮೇಲಿಂದ ಬಿದ್ದು ಕೈ, ತಲೆಗೆ ಗಾಯವಾಗಿ ರವಿ ಎಂಬ ಕಳ್ಳ ಹಾಲಟ್ಟಿ ಜಿಲ್ಲಾಸ್ಪತ್ರೆ ಸೇರಿದ್ದ. ಲಕ್ಷಾಂತರ ರೂಪಾಯಿ ನಗದು ಚಿನ್ನಾಭರಣವನ್ನು ಖದೀಮರ ಗ್ಯಾಂಗ್ ದೋಚಿದೆ. ದಿನೇದಿನೆ ಕಳ್ಳತನ ಪ್ರಕರಣ ಹೆಚ್ಚಾಗುತ್ತಿದ್ದರೂ ಕಳ್ಳರನ್ನ ಬಂಧಿಸಲು ಸಾಧ್ಯವಾಗದೆ ಜನರಿಂದ ಪೊಲೀಸರು ಆಕ್ರೋಶ ಎದುರಿಸುವಂತಾಗಿದೆ.