ಚಿಕ್ಕೋಡಿ: ಖಾಸಗಿ ಮತ್ತು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಶಾಲಾ ಶುಲ್ಕವನ್ನು ರಾಜ್ಯ ಸರ್ಕಾರ ಮನ್ನಾ ಮಾಡಿಬೇಕು ಎಂದು ಒತ್ತಾಯಿಸಿ ಬಹುಜನ ಸಮಾಜ ಪಕ್ಷ ಕಾರ್ಯಕರ್ತರು ತಹಶೀಲ್ದಾರ್ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ರಾಯಬಾಗ ತಹಶೀಲ್ದಾರ್ ಕಚೇರಿಯಲ್ಲಿ ಮನವಿ ಸಲ್ಲಿಸಿದ ಅವರು, ಕೋವಿಡ್-19 ಲಾಕ್‍ಡೌನ್‍ನಿಂದಾಗಿ ದೇಶಾದ್ಯಂತ ಸುಮಾರು 18 ಕೋಟಿಗೂ ಅಧಿಕ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಇದರಲ್ಲಿ ಹೆಚ್ಚಿನ ಸಂಖ್ಯೆಯ ಕೂಲಿ-ಕಾರ್ಮಿಕರು ಸೇರಿದ್ದಾರೆ. ಇದರಿಂದ ಅವರ ಮಕ್ಕಳು ಶಿಕ್ಷಣದಿಂದ ವಿಮುಖರಾಗುತ್ತಿದ್ದಾರೆ ಎಂದು ಹೇಳಿದರು.
ಬಡ ಪಾಲಕರು ಮಕ್ಕಳ ಶಾಲಾ ಶುಲ್ಕವನ್ನು ಭರಿಸಲು ಅಸಾಧ್ಯವಾಗಿದ್ದು, ಸರ್ಕಾರ ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಆನ್‍ಲೈನ್ ಬೋಧನೆಯಿಂದಾಗಿ ಬಡ ಪಾಲಕರು ಮಕ್ಕಳಿಗೆ ಮೊಬೈಲ್ ಕೊಡಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರ ಮಕ್ಕಳ ಪಾಲಕರ ನೆರವಿಗೆ ನಿಲ್ಲಬೇಕು ಎಂದರು.