ಬೆಳಗಾವಿ: ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕನೋರ್ವ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿಯ ಭಾಗ್ಯನಗರದ 10ನೇ ಕ್ರಾಸ್ನಲ್ಲಿ ಇಂದು ಬೆಳಗ್ಗೆ ನಡೆದಿದೆ. ಉತ್ತರ ಪ್ರದೇಶ ಮೂಲದ ಕುಟುಂಬದ 14 ವರ್ಷದ ರಜತ್ ಗೌರವ ಮೃತ ಬಾಲಕ. ಕಾರು ತೊಳೆಯುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಈ ಅವಘಡ ಸಂಭವಿಸಿದೆ.
8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ರಜತ್ ಶಾಲೆಗೆ ರಜೆ ಇದ್ದ ಕಾರಣ, ಬೆಳಗ್ಗೆ ಮನೆ ಮನೆಗೆ ದಿನಪತ್ರಿಕೆ ಹಾಕುವ ಕೆಲಸ ಮಾಡುತ್ತಿದ್ದ. ಇಂದು ಬೆಳಗ್ಗೆ ಎಂದಿನಂತೆ ಚೌಗಲೆ ಎಂಬವರ ಮನೆಗೆ ಪೇಪರ್ ಹಾಕಲು ತೆರಳಿದಾಗ, ಆ ಮನೆಯವರು ಅಮಾವಾಸೆ ಹಿನ್ನೆಲೆ ಕಾರು ತೊಳೆಯಲು ಹೇಳಿದ್ದಾರೆ. ಅದರಂತೆ, ಕಾರು ತೊಳೆಯಲೆಂದು ಹೋದಾಗ ಕಾರಿನ ಪಕ್ಕದಲ್ಲಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ವಿದ್ಯುತ್ ತಂತಿ ಸ್ಪರ್ಶಿಸಿದ ತಕ್ಷಣವೇ ಬಾಲಕನನ್ನು ಚೌಗಲೆ ಅವರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದರೆ ಆತ ಬದುಕುಳಿಯುತ್ತಿದ್ದ. ಆದರೆ, ಚೌಗಲೆ ಅವರ ನಿರ್ಲಕ್ಷ್ಯವೇ ಬಾಲಕನ ಸಾವಿಗೆ ಕಾರಣ ಎಂದು ರಜತ್ ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಸ್ಥಳೀಯರು ಹೇಳಿದ್ದೇನು?: "ಮನೆ ಪರಿಸ್ಥಿತಿ ಅಷ್ಟೊಂದು ಸರಿ ಇಲ್ಲದ್ದರಿಂದ ಹುಡುಗ ಪೇಪರ್ ಹಾಕಲು ಹೋಗುತ್ತಿದ್ದ. ಹೀಗೆ ಚೌಗುಲೆ ಅವರ ಮನೆಗೆ ಪೇಪರ್ ಕೊಡಲು ಹೋದಾಗ, ಕಾರು ತೊಳೆಯಿರಿ ಎಂದು ಹೇಳಿದ್ದಾರೆ. ಅಲ್ಲಿ ಅನಾಹುತವಾಗಿ ಬಾಲಕ ಸಾವನ್ನಪ್ಪಿದ್ದಾನೆ. ಬಾಲಕನ ಸಾವಿಗೆ ನ್ಯಾಯ ಸಿಗಬೇಕು. ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರಾದ ಇಮ್ತಿಯಾಜ್ ಮುಲ್ಲಾ ಒತ್ತಾಯಿಸಿದರು.
ಇದನ್ನೂ ಓದಿ: Electric shock: ಬೆಳಗಾವಿಯಲ್ಲಿ ವಿದ್ಯುತ್ ತಂತಿ ತಗುಲಿ ರೈತ ದಂಪತಿ ಸಾವು
ಪ್ರತ್ಯೇಕ ಪ್ರಕರಣ: ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿ ವಿದ್ಯುತ್ ಶಾಕ್‌ಗೆ ಇಬ್ಬರು ಬಲಿಯಾಗಿದ್ದರು. ಕಬ್ಬು ತುಂಬಿಕೊಂಡು ತೆರಳುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿರುವ ದಾರುಣ ಘಟನೆ ಕೊಳ್ಳೇಗಾಲ ತಾಲೂಕಿನ ಗುಂಡಾಲ್ ಜಲಾಶಯ ರಸ್ತೆಯ ದುರ್ಗಮ್ಮನ ದೇವಸ್ಥಾನದ ಬಳಿ ನಡೆದಿತ್ತು. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಅಂಗರಪುರ ಗ್ರಾಮದ ನಿವಾಸಿಗಳಾದ ಲಾರಿ ಕ್ಲೀನರ್ ಚಿನ್ನು ಮತ್ತು ಲಾರಿ ಚಾಲಕ ಹಾಗೂ ಮಾಲೀಕ ಪ್ರಕಾಶ್ ಮೃತರು.
ಗುಂಡಾಲ್ ಜಲಾಶಯ ಸಮೀಪದ ಸಿದ್ದಪ್ಪ ಎಂಬುವರ ಜಮೀನಿನಲ್ಲಿ ಕಬ್ಬು ತುಂಬಿಕೊಂಡು ತೆರಳುವಾಗ ದುರ್ಗಮ್ಮನ ದೇವಸ್ಥಾನ ಹತ್ತಿರ ರಸ್ತೆ ಬದಿಯಲ್ಲಿ ಹಾದು ಹೋಗಿರುವ ಹೈ ಪವರ್ ವಿದ್ಯುತ್ ತಂತಿ ತಗುಲಿ ಈ ದುರ್ಘಟನೆ ಸಂಭವಿಸಿತ್ತು. ಈ ವೇಳೆ ಚಿನ್ನು ಹಾಗೂ ಪ್ರಕಾಶ್ ಲಾರಿಯಿಂದ ಹೊರಗಿಳಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾದರೂ ಪ್ರಯತ್ನ ವಿಫಲವಾಗಿತ್ತು. ಹೈ ಪವರ್ ವಿದ್ಯುತ್ ಪ್ರವಹಿಸಿ ಇಬ್ಬರೂ ಸ್ಥಳದಲ್ಲೇ ಅಸುನೀಗಿದ್ದರು. ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.
ಇದನ್ನೂ ಓದಿ: ಮೈಸೂರು: ವಿದ್ಯುತ್ ತಂತಿ ಸ್ಪರ್ಶಿಸಿ ಮೂವರು ರೈತರ ಸಾವು