ಚಿಕ್ಕೋಡಿ (ಬೆಳಗಾವಿ): ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಹೆಚ್ವಾಗುತ್ತಿರುವ ಹಿನ್ನೆಲೆ ಮಹಾರಾಷ್ಟ್ರ ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕಾಗವಾಡ ತಾಲೂಕಾಡಳಿತ ಮಹಾರಾಷ್ಟ್ರ ಸಂಪರ್ಕಿಸುವ ರಸ್ತೆಗಳನ್ನು ಬಂದ್ ಮಾಡುವ ಮೂಲಕ ಕಠಿಣ ಕ್ರಮಕ್ಕೆ ಮುಂದಾಗಿದೆ.
ಕರ್ನಾಟಕದ ಗಡಿ ಭಾಗ ಕಾಗವಾಡ ತಾಲೂಕಿನ ಮಂಗಾವತಿ ಗ್ರಾಮದಿಂದ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಖಿದ್ರಾಪುರ ಸಂಪರ್ಕ ರಸ್ತೆಯನ್ನು ಕಾಗವಾಡ ಪಿಎಸ್ಐ ಹಣಮಂತ ಧರ್ಮಟ್ಟಿ ನೇತೃತ್ವದಲ್ಲಿ ಜುಗುಳ ಗ್ರಾಮ ಪಂಚಾಯಿತಿ ಸದಸ್ಯರು ಸೇರಿ ಸಂಪೂರ್ಣವಾಗಿ ಬಂದ್ ಮಾಡಿದರು.
ಈ ವೇಳೆ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಉಮೇಶ್ಗೌಡ ಪಾಟೀಲ್, ಕೊರೊನಾ 2ನೇ ಅಲೆ ಪ್ರಾರಂಭವಾಗಿದ್ದು, ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿದೆ. ಅದಕ್ಕಾಗಿ ಮಹಾರಾಷ್ಟ್ರದಿಂದ ಬರುವ ಎಲ್ಲಾ ರಸ್ತೆ ಬಂದ್ ಮಾಡುವುದರ ಮೂಲಕ ಮುಂಜಾಗ್ರತೆ ವಹಿಸಲಾಗುತ್ತಿದೆ. ಇದಕ್ಕೆ ಎಲ್ಲಾ ಸ್ಥಳೀಯರು ಸಹಕರಿಸಬೇಕು ಎಂದಿದ್ದಾರೆ.