ಬೆಳಗಾವಿ: ನಗರದ ಬೀಮ್ಸ್ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತ ರೋಗಿಗಳಿಗೆ ಸಮರ್ಪಕ ಔಷಧ ಸಿಗದೇ ಪರದಾಡುತ್ತಿದ್ದಾರೆ. ಹೀಗಾಗಿ ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನಗರದ ಬೀಮ್ಸ್ ಆಸ್ಪತ್ರೆಯಲ್ಲಿ ಸದ್ಯ 50ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಪಾಸಿಟಿವ್ ಆ್ಯಕ್ಟೀವ್ ಕೇಸ್ಗಳಿವೆ. ಆದರೆ, ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಪೊಸಕೊನಜೋಲ್ ಮಾತ್ರೆಗಳು ಸಿಗುತ್ತಿಲ್ಲ. ಹೀಗಾಗಿ, ತೀವ್ರ ಆತಂಕಕ್ಕೆ ಒಳಗಾಗಿರುವ ಸೋಂಕಿತರು- ಸಂಬಂಧಿಕರು ಔಷಧ ನೀಡುವಂತೆ ಒತ್ತಾಯಿಸುತ್ತಿದ್ದಾರೆ.
ಈ ಕುರಿತು ಮಾತನಾಡಿದ ಸೋಂಕಿತರು, ಶಸ್ತ್ರಚಿಕಿತ್ಸೆ ನಂತರ 90 ದಿನಗಳ ಕಾಲ ಪೊಸಕೊನಜೋಲ್ ಮಾತ್ರೆ ತೆಗೆದುಕೊಳ್ಳಲು ವೈದ್ಯರು ಹೇಳ್ತಾರೆ. ನಮ್ಮ ಕಣ್ಮುಂದೆಯೇ ಹಲವು ಜನರು ಸಾವನ್ನಪ್ಪಿದ್ದಾರೆ. ನಾಲ್ಕೈದು ಜನ ಮಕ್ಕಳು ಕೂಡ ಬ್ಲ್ಯಾಕ್ ಫಂಗಸ್ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಮಾತ್ರೆಗಳು ಸಿಗುತ್ತಿಲ್ಲ ಎಂದಿದ್ದಾರೆ.
ನಮ್ಮ ಬಳಿ ಅಷ್ಟೊಂದು ಹಣವಿಲ್ಲ: ಡಿಸ್ಚಾರ್ಜ್ ಆದವರು 90 ದಿನಗಳ ಕಾಲ ಮಾತ್ರೆ ತೆಗೆದುಕೊಳ್ಳಬೇಕು ಅಂತಾರೆ. ಹೊರಗಡೆ ಪೊಸಕೊನಜೋಲ್ 10 ಮಾತ್ರೆಗೆ 5,500 ರೂಪಾಯಿ ಬೇಕಾಗುತ್ತದೆ. 90 ದಿನ ಅಂದ್ರೆ ಒಂದೂವರೆ ಲಕ್ಷ ರೂಪಾಯಿ ಮಾತ್ರೆಯದ್ದೇ ಆಗುತ್ತದೆ. ಆದರೆ, ಮಾತ್ರೆಗಳನ್ನು ಖರೀದಿಸಲು ನಮ್ಮ ಬಳಿ ಅಷ್ಟೊಂದು ಹಣವಿಲ್ಲ. ಮೊನ್ನೆ ಸಿಎಂ ಬಸವರಾಜ ಬೊಮ್ಮಾಯಿ ಬೆಳಗಾವಿಗೆ ಭೇಟಿ ನೀಡಿದ್ರು.
ಸಿಎಂ ಭೇಟಿ ವೇಳೆ ಆಸ್ಪತ್ರೆ ಶುಚಿತ್ವ ಕಾರ್ಯ ಮಾಡಿ ಔಷಧ ಕೊಡ್ತೀವಿ ಅಂದಿದ್ರು. ಈ ಬಗ್ಗೆ ಬೀಮ್ಸ್ ನಿರ್ದೇಶಕ, ಹೆಚ್‌ಓಡಿ, ವೈದ್ಯರನ್ನು ಕೇಳಿದರೆ ಯಾರೊಬ್ಬರೂ ನಮಗೆ ಸ್ಪಂದಿಸುತ್ತಿಲ್ಲ ಎಂದು ರಾಜ್ಯ ಸರ್ಕಾರ, ಬೆಳಗಾವಿ ಜಿಲ್ಲಾಡಳಿತದ ವಿರುದ್ಧ ಬ್ಲ್ಯಾಕ್ ಫಂಗಸ್ ಸೋಂಕಿತರು, ಸಂಬಂಧಿಕರು ಆಕ್ರೋಶ ಹೊರಹಾಕಿದರು.
ಬಡರೋಗಿಗಳ ಕಷ್ಟವನ್ನು ಆಲಿಸುತ್ತಿಲ್ಲ: ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಸದ್ಯ 50ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಪಾಸಿಟಿವ್ ಆ್ಯಕ್ಟೀವ್ ಪ್ರಕರಣಗಳಿವೆ. ಈಗಾಗಲೇ 190 ಬ್ಲ್ಯಾಕ್ ಫಂಗಸ್ ಸೋಂಕಿತರು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಸರ್ಕಾರ ಬಡರೋಗಿಗಳ ಕಷ್ಟವನ್ನು ಆಲಿಸುತ್ತಿಲ್ಲ. ಇನ್ನಾದರೂ ರಾಜ್ಯ ಸರ್ಕಾರ ನಮ್ಮ ನೋವಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಓದಿ: ಜೆಡಿಎಸ್ 'ತೆನೆ'ಬೇನೆ ಇಳಿಸಿ.. ಮಗನ ಭವಿಷ್ಯ ಭದ್ರಪಡಿಸಲು ಕೈ ಕುಲುಕ್ತಾರೆ ಜಿಟಿಡಿ.. ಈಗಿದು ಅಧಿಕೃತ