ಬೆಳಗಾವಿ: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯು ಚುನಾವಣೆಗೆ ಮಾಡಿರುವ ತಂತ್ರವಾಗಿದೆ. ನಿಗಮ, ಪ್ರಾಧಿಕಾರ ಸ್ಥಾಪನೆ ಬದಲು ಆರ್ಥಿಕವಾಗಿ ಹಿಂದುಳಿದವರಿಗೆ ಹೆಚ್ಚು ಒತ್ತು ಕೊಡುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಬೇಕೆಂದು ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಗೋಕಾಕ್ ನಗರದ ಹಿಲ್ ಗಾರ್ಡನ್ ನಿವಾಸ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿಗೊಂದು ನಿಗಮ, ಪ್ರಾಧಿಕಾರ ಮಾಡುತ್ತಾ ಹೋದರೆ ಅದಕ್ಕೆ ಮಿತಿ ಇರಲ್ಲ. ಭಾರತದಲ್ಲಿ 5ರಿಂದ ಆರು ಸಾವಿರ ಜಾತಿಗಳಿವೆ. ಎಲ್ಲಾ ಜಾತಿಗಳಿಗೆ ಬಿಜೆಪಿಯು ನಿಗಮ, ಪ್ರಾಧಿಕಾರ ಮಾಡುವ ಮುಖಾಂತರ ಪ್ರಜಾಪ್ರಭುತ್ವ ವಿರೋಧಿ ಕೆಲಸ ಮಾಡಲು ಹೊರಟಿದೆ ಎಂದರು.
ಯಾವುದೇ ವೈಜ್ಞಾನಿಕ ಅಧ್ಯಯನಗಳಿಲ್ಲದೆ ಜಾತಿ ಆಧಾರಿತ ನಿಗಮ-ಪ್ರಾಧಿಕಾರ ಸ್ಥಾಪನೆ ಸಮಾಜ ವಿರೋಧಿ ಮಾತ್ರವಲ್ಲ, ಪ್ರಜಾಪ್ರಭುತ್ವ ವಿರೋಧಿ ತೀರ್ಮಾನವಾಗಿದೆ. ಚುನಾವಣೆಗಳನ್ನು ಸಾಧನೆಯ ಬಲದಿಂದ ಗೆಲ್ಲಲಾಗದ ಬಿಜೆಪಿ ಸರ್ಕಾರ ಇಂತಹ ಅಗ್ಗದ ತಂತ್ರ-ಕುತಂತ್ರಗಳನ್ನು ಮಾಡಿ ಸಮಾಜವನ್ನು ಒಡೆಯಲು ಹೊರಟಿದೆ ಎಂದು ಆರೋಪಿಸಿದರು.
ಗಡಿ ವಿಚಾರಕ್ಕೆ ಸಂಬಂಧಿಸಿದಂತೆ, ಅಜಿತ್ ಪವಾರ್ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಗಡಿ ವಿಚಾರದಲ್ಲಿ ಮಹಾಜನ್ ಆಯೋಗದ ವರದಿಯೇ ಅಂತಿಮ. ಗಡಿ ಭಾಗದಲ್ಲಿ ಹಾಗೂ ರಾಜ್ಯಾದ್ಯಂತ ಇರುವ ಕನ್ನಡ ಮತ್ತು ಮರಾಠಿಯ ಎರಡೂ ಸಮುದಾಯಗಳು ಸೌಹಾರ್ದತೆಯಿಂದ ಬದುಕುತ್ತಿವೆ ಎಂದರು.
ಸತತ 2ನೇ ಬಾರಿಯು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯದ ಹಿನ್ನೆಲೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಬೆಳಗಾವಿಯಲ್ಲಿ ಅಧಿವೇಶನ ಮಾಡಿದರೆ ಅಭಿವೃದ್ಧಿಯಲ್ಲಿ ವಿಫಲವಾಗಿರುವ ಬಿಜೆಪಿ ಸರ್ಕಾರ ಜನರಿಗೆ ಉತ್ತರ ಕೊಡಬೇಕಾಗುತ್ತದೆ. ಆದ್ದರಿಂದ ಅವರು ಅಧಿವೇಶನವನ್ನು ಬೆಂಗಳೂರಿಗೆ ಸಿಮೀತ ಮಾಡಿಕೊಂಡಿದ್ದಾರೆ ಎಂದರು.
ದೇಶದ ವಿವಿಧೆಡೆ ಕಾಂಗ್ರೆಸ್ ಸೋಲು ಕುರಿತಂತೆ, ಚುನಾವಣೆಗಳಲ್ಲಿ ಸೋಲು-ಗೆಲುವು ಸಾಮಾನ್ಯವಾಗಿದೆ. ಕಾಂಗ್ರೆಸ್ ಪಕ್ಷವನ್ನು ಇನ್ನೂ ಹೆಚ್ಚಾಗಿ ಬಲಗೊಳಿಸುವಲ್ಲಿ ಸಕ್ರಿಯವಾಗಿ ಎಲ್ಲಾ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಕರಾವಳಿ ಸೇರಿದಂತೆ ರಾಜ್ಯದ ಎಲ್ಲಾ ಮೂಲೆಗಳಲ್ಲಿ ಪಕ್ಷವನ್ನು ಬಲಪಡಿಸಲು ಈಗಾಗಲೇ ಕಾರ್ಯತಂತ್ರ ರೂಪಿಸಲಾಗಿದೆ. ಬಿಜೆಪಿಯು ಹಣ ಬಲದಿಂದ ಚುನಾವಣೆ ಗೆದ್ದಿದೆ. ಆದರೆ ಕಾಂಗ್ರೆಸ್ ಪ್ರಮಾಣಿಕವಾಗಿ ಚುನಾವಣೆ ಎದುರಿಸಿದೆ ಎಂದು ಸತೀಶ್ ಹೇಳಿದರು.