ಬೆಳಗಾವಿ: ಡಿ. ಕೆ. ಶಿವಕುಮಾರ್ ಅವರನ್ನು ಬಿಟ್ಟು ತುಂಬಾ ಜನ ನಮ್ಮೊಂದಿಗೆ ಬರುವವರಿದ್ದಾರೆ, ಅವರನ್ನು ಕಾಯ್ದುಕೊಂಡರೇ ಒಳ್ಳೆಯದು ಎಂದು ಡಿ.ಕೆ. ಶಿವಕುಮಾರ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ. ಬಿಜೆಪಿಗೆ ಅಭ್ಯರ್ಥಿ ಸಿಗದ ಹಿನ್ನೆಲೆ ಬಸವರಾಜ ಹೊರಟ್ಟಿ ಅವರನ್ನು ಬಿಜೆಪಿಗೆ ಸೆಳೆದಿದ್ದಾರೆ ಎಂದು ಆರೋಪಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕಟೀಲ್, ಡಿ.ಕೆ.ಶಿವಕುಮಾರ್ ಅವರನ್ನು ಬಿಟ್ಟು ತುಂಬಾ ಜನ ನಮ್ಮ ಜೊತೆ ಬರುವವರಿದ್ದಾರೆ. ಅವರನ್ನು ಉಳಿಸಿಕೊಂಡರೆ ಒಳ್ಳೆಯದು. ಎಷ್ಟು ಜನ ಬರುತ್ತಾರೆ ಕಾದು ನೋಡಿ ಎಂದು ನಳಿನ್‌ಕುಮಾರ್ ಕಟೀಲ್ ಹೇಳಿದ್ದಾರೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳಲ್ಲೂ ಬಿಜೆಪಿ ಗೆಲವು ಸಾಧಿಸಲಿದೆ. ಈಗಾಗಲೇ ನಾವು ಪೂರ್ಣ ತಯಾರಿ ಮಾಡಿಕೊಂಡಿದ್ದೇವೆ. ಮೈಸೂರಿನಲ್ಲಿ ಈಗಾಗಲೇ ನಾಮಪತ್ರ ಸಲ್ಲಿಕೆ ಮಾಡಲಾಗಿದೆ. ಇಂದು ಹನುಮಂತ ನಿರಾಣಿ, ಅರುಣ್ ಶಹಾಪುರ ಅವರು ನಾಮಪತ್ರ ಸಲ್ಲಿಸಿದ್ದಾರೆ. ಬಸವರಾಜ ಹೊರಟ್ಟಿ ಹಿರಿಯರು, ವಿಧಾನ ಪರಿಷತ್ ನಲ್ಲಿ ಅನುಭವ ಇದ್ದಂತವರು. ಸದ್ಯ ಜೆಡಿಎಸ್ ಬಿಟ್ಟು ಬಿಜೆಪಿ ಸೇರ್ಪಡೆ ಆಗಿದ್ದು, ನಮ್ಮ ಪಕ್ಷದ ಚಿಹ್ನೆಯಡಿ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಮಂಗಳೂರಿನಲ್ಲಿ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಕಾಲೇಜಿಗೆ ಆಗಮಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ನಳಿನ್, ಇದು ಕಾನೂನಾತ್ಮಕ ಮತ್ತು ಸಾಂವಿಧಾನಿಕ ವಿಚಾರವಾಗಿದೆ. ನ್ಯಾಯಾಲಯ ಈಗಾಗಲೇ ಈ ಬಗ್ಗೆ ತೀರ್ಪು ಕೊಟ್ಟಿದೆ. ಆ ತೀರ್ಪಿನ ಪಾಲನೆ ಎಲ್ಲರ ಕರ್ತವ್ಯ ಎಂದು ಹೇಳಿದರು.
ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷರ ವಿರುದ್ಧ ಸಾಹಿತಿಗಳ ಪತ್ರ ಸಮರ ಹಾಗೂ ಡಿಕೆಶಿ ಹೋರಾಟ ಮಾಡುವುದಾಗಿ ಹೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸ್ವಲ್ಪ ದಿನ ಹೋರಾಟ ಮಾಡಿಕೊಂಡು ರೋಡಿನಲ್ಲೇ ಇರುವುದು ಒಳ್ಳೆಯದು. ಇತಿಹಾಸ ತಿಳಿಸುವಂತಹ ಕೆಲಸ ಕಾರ್ಯ ಆಗಬೇಕು. ಇತಿಹಾಸ ತಿಳಿದರೆ ಮಾತ್ರ ಇತಿಹಾಸ ನಿರ್ಮಾಣ ಮಾಡಬಲ್ಲರು. ಹಾಗಾಗಿ ಇತಿಹಾಸ ತಿಳಿಸುವ ಕಾರ್ಯವನ್ನು ಸಮಿತಿಗಳು ಆಗಾಗ ಮಾಡುತ್ತವೆ. ಹಿಂದಿನಿಂದಲೂ ಪರಿಷ್ಕರಣೆಗಳು ನಡೆಯುತ್ತಾ ಬಂದಿವೆ. ಪರಿಷ್ಕರಣಾ ಸಂದರ್ಭದಲ್ಲಿ ಇಂತಹ ಚರ್ಚೆಗಳು ಸಹಜ ಎಂದು ಕಟೀಲ್ ಹೇಳಿದ್ದಾರೆ.
ಓದಿ : ಕೆಸಿಆರ್ ಭೇಟಿ: ದೇವೇಗೌಡರ ನಿವಾಸದಲ್ಲಿ ಬಿರಿಯಾನಿ, ನಾಟಿ ಕೋಳಿ ಸಾರಿನ ಘಮಲು