ಬೆಳಗಾವಿ: ರಾಮದುರ್ಗ ಪಟ್ಟಣದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತ ಸೇರಿ ಇಬ್ಬರಿಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಗೊಂಡಿದ್ದವರ ಆರೋಗ್ಯ ವಿಚಾರಿಸಿದ ಬಳಿಕ ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ ಆರೋಪಿಗಳ ಶೀಘ್ರ ಬಂಧನಕ್ಕೆ ಪೊಲೀಸರಿಗೆ ಸೂಚಿಸಿದ್ದಾರೆ.
ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿಮ್ಮ ಮನೆಯಲ್ಲಿರುವ ಮಕ್ಕಳು, ಗೂಂಡಾಗಳಿಗೆ ಬುದ್ಧಿ ಹೇಳಿ. ನೀವು ಬುದ್ಧಿ ಹೇಳದೇ ಇದ್ದರೆ ರಾಮದುರ್ಗದಲ್ಲಿ ಮುಂದೆ ಬೇರೆನೇ ನಡೆಯುತ್ತದೆ. ಗಲಭೆಗೆ ಕುಮ್ಮಕ್ಕು, ಪ್ರಚೋದನೆ ನೀಡಿದವರು ಎಷ್ಟೇ ಪ್ರಭಾವಿ ಇದ್ದರೂ ಬಿಡುವುದಿಲ್ಲ. ನಾನು ಶಾಸಕನಾದ ಅವಧಿಯಲ್ಲಿ ಒಮ್ಮೆಯೂ ಕೋಮು ಗಲಭೆಯಾಗಲು ಅವಕಾಶ ಕೊಟ್ಟಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಕಳೆದ ದಿನ ಮುಸ್ಲಿಮರ ದೊಡ್ಡ ಹಬ್ಬ, ಹಿಂದೂಗಳಿಗೂ ಭೂದೇವಿಗೆ ಚರಗ ಚೆಲ್ಲುವ ಸೀಗೆ ಹುಣ್ಣಿಮೆ ಹಬ್ಬವಾಗಿದೆ. ಇದೇ ದಿನವೇ ಇಂಥ ಘಟನೆ ನಡೆದಿರುವುದನ್ನು ನಾನು ಖಂಡನೆ ಮಾಡುತ್ತೇನೆ. ಕಿಡಿಗೇಡಿಗಳನ್ನು ಹದ್ದು ಬಸ್ತಿನಲ್ಲಿ ಇಡಲು ಗೃಹಸಚಿವರು, ಮುಖ್ಯಮಂತ್ರಿಗೆ ಮನವರಿಕೆ ಮಾಡುತ್ತೇನೆ. ಆರೋಪಿಗಳ ವಿರುದ್ಧ ಗೂಂಡಾ ಕೇಸ್ ಹಾಕಲು ಪೊಲೀಸರಿಗೆ ಒತ್ತಾಯಿಸುತ್ತೇನೆ ಎಂದರು.
ಇದಕ್ಕೂ ಮೊದಲು ಶಾಸಕ ಮಹಾದೇವಪ್ಪ ಯಾದವಾಡ ಚಾಕುವಿನಿಂದ ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿರುವ ರವಿ ಬಂಡಿವಡ್ಡರ ಅವರ ಆರೋಗ್ಯವನ್ನು ವಿಚಾರಿಸಿದರು. ಈ ವೇಳೆ ರವಿ ಬಂಡಿವಡ್ಡರ ಪೋಷಕರ ಬಳಿ ಮಾಹಿತಿ ಪಡೆದು ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೇ ಕ್ರಮವಹಿಸಿ, ಆರೋಪಿಗಳನ್ನು ಬಂಧಿಸಿ ಎಂದು ಪೊಲೀಸರಿಗೆ ಸೂಚಿಸಿದರು.
ಓದಿ: ರಾಮದುರ್ಗದಲ್ಲಿ ಶ್ರೀರಾಮಸೇನೆ ಕಾರ್ಯಕರ್ತ ಸೇರಿ ಇಬ್ಬರಿಗೆ ಚಾಕು ಇರಿತ : ಸ್ಥಳದಲ್ಲಿ ಬಿಗುವಿನ ವಾತಾವರಣ