ಬೆಳಗಾವಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡರೂ ಬಿಜೆಪಿ ಸರ್ಕಾರದಲ್ಲಿ ಡಿಸಿಎಂ ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದ ಲಕ್ಷ್ಮಣ್ ಸವದಿ ಈಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಸವದಿ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ತಂತ್ರ ಉಲ್ಟಾ ಹೊಡೆದಿರುವುದು ಮಹಾರಾಷ್ಟ್ರ ಚುನಾವಣೆಯಲ್ಲಿ ಸಾಬೀತಾಗಿದೆ. ಸವದಿ ಪ್ರಚಾರ ಮಾಡಿದ್ದ ಕ್ಷೇತ್ರಗಳಲ್ಲೆಲ್ಲಾ ಬಿಜೆಪಿಗೆ ಜನ ಶಾಕ್ ಕೊಟ್ಟಿದ್ದಾರೆ.
ಬೆಳಗಾವಿ ರಾಜಕಾರಣದಲ್ಲಿ ತಮ್ಮದೇ ಹಿಡಿತ ಹೊಂದಿರುವ ಲಕ್ಷ್ಮಣ್ ಸವದಿ, ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿ ಆಗಿದ್ದರು. ಜಿಲ್ಲೆಯಲ್ಲಿ ಎಂಟು ಬಾರಿಗೆ ಶಾಸಕರಾಗಿರುವ ಉಮೇಶ್ ಕತ್ತಿಗೆ ಸಚಿವ ಸ್ಥಾನ ನೀಡದ ಬಿಜೆಪಿ ಹೈಕಮಾಂಡ್, ಸೋಲುಂಡಿದ್ದ ಲಕ್ಷ್ಮಣ್ ಸವದಿಗೆ ಮಣೆ ಹಾಕಿತ್ತು. ಕೇಂದ್ರದ ಈ ನಡೆಗೆ ಸ್ವಪಕ್ಷದಲ್ಲೇ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೆ ಮಹಾರಾಷ್ಟ್ರ ಚುನಾವಣೆ ಹೊಣೆಗಾರಿಕೆ ಸಲುವಾಗಿ ಸಚಿವ ಸ್ಥಾನ ನೀಡಲಾಗಿದೆ ಎಂಬ ಸಮಜಾಯಿಷಿಯನ್ನು ಹೈಕಮಾಂಡ್ ನೀಡಿತ್ತು. ಸಧ್ಯಕ್ಕೆ ಮಹಾರಾಷ್ಟ್ರ ಚುನಾವಣೆಯಲ್ಲಿ ಸವದಿ ಪ್ರಚಾರ ತಂತ್ರ ಫಲಿಸಿಲ್ಲ. ಅವರು ಪ್ರಚಾರ ಮಾಡಿರುವ ಕ್ಷೇತ್ರಗಳಲ್ಲಿ ಬಿಜೆಪಿ ಪರಾಜಯಗೊಂಡಿದ್ದು, ಇದರಿಂದ ಡಿಸಿಎಂ ಸ್ಥಾನಕ್ಕೆ ಕುತ್ತು ಬರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಲಕ್ಷ್ಮಣ್ ಸವದಿಗೆ ಬಿಜೆಪಿ ಹೈಕಮಾಂಡ್ ಮಹಾರಾಷ್ಟ್ರ ಚುನಾವಣೆ ಉಸ್ತುವಾರಿ ವಹಿಸಿದ ನಂತರ, ಅಲ್ಲೇ ವಾಸ್ತವ್ಯ ಹೂಡಿ ಭರ್ಜರಿ ಪ್ರಚಾರ ನಡೆಸಿದ್ದರು. ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಲಾಪುರ ಗಡಿ ಭಾಗದ ಜಿಲ್ಲೆಗಳಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದರು. ಆದ್ರೆ ಸವದಿ ಪ್ರಚಾರ ಮಾಡಿದ್ದ 18 ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ - ಶಿವಸೇನೆ ಕೂಟ ಕೇವಲ ನಾಲ್ಕು ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿದೆ. ಇನ್ನು ಕಾಂಗ್ರೆಸ್ ಎನ್ ಸಿ ಪಿ 11 ಸ್ಥಾನಗಳಲ್ಲಿ ಜಯಗಳಿಸಿದೆ. ಜೊತೆಗೆ ಲಿಂಗಾಯತರ ಪ್ರಭಾವ ಹೆಚ್ಚಿರುವ ಈ ಕ್ಷೇತ್ರಗಳ ಪ್ರಚಾರಕ್ಕಾಗಿ ಡಿಸಿಎಂ ಸವದಿಯನ್ನು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿಯೂ ಸೇರಿಸಲಾಗಿತ್ತು. ಆದರೆ ಮಹಾರಾಷ್ಟ್ರ ಚುನಾವಣೆ ಫಲಿತಾಂಶದ ನಂತರ ಬಿಜೆಪಿ ಹೈಕಮಾಂಡ್ ಊಹೆ ತಪ್ಪಾಗಿದ್ದು, ಈಗ ಸಚಿವ ಸ್ಥಾನಕ್ಕಾಗಿ ಅಸಮಾಧಾನ ಹೊಂದಿದ್ದ ಶಾಸಕರಿಗೆ ಬಿಜೆಪಿ ಮುಖಂಡರು ಯಾವ ರೀತಿಯ ಸಮಜಾಯಿಷಿ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.