ಬೆಳಗಾವಿ: ತಂದೆಯೊರ್ವ ತನ್ನಿಬ್ಬರು ಹೆಣ್ಣುಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಯತ್ನಸಿದ್ದ ಘಟನೆ ಬೆಳಗಾವಿಯಲ್ಲಿ ನಡೆದಿತ್ತು. ಇದಕ್ಕೆ ಅಪರಿಚಿತರು ಮಾಡಿಸಿದ ಮಾಟ ಮಂತ್ರದಿಂದ ಖಿನ್ನತೆಗೊಳಗಾಗಿ ಈ ಕೃತ್ಯಕ್ಕೆ ಕೈ ಹಾಕಿದ್ದಾನೆಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಕೆ.ಎಚ್. ಕಂಗ್ರಾಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಅನಿಲ್ ಬಾಂದೇಕರ ತನ್ನಿಬ್ಬರು ಮಕ್ಕಳಾದ ಅಂಜಲಿ (8) ಹಾಗೂ ಅನನ್ಯಾ (4)ಗೆ ವಿಷ ಉಣಿಸಿದ್ದಾನೆ. ಬಳಿಕ ತಾನೂ ವಿಷ ಸೇವಿಸಿದ್ದಾನೆ. ಮಕ್ಕಳಿಬ್ಬರೂ ಮನೆಯಲ್ಲಿ ಮೃತಪಟ್ಟಿದ್ದು, ಅನಿಲ್ ಜಿಲ್ಲಾಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ. ಅನಿಲ್ ಬಾಂದೇಕರ್ ಟೈಲ್ಸ್ ಅಳವಡಿಕೆ ಕೆಲಸ ಮಾಡುತ್ತಿದ್ದನು.
ಪ್ರಕರಣದ ವಿವರ:
ಜುಲೈ 11 ರಂದು ಮಣ್ಣೆತ್ತಿನ ಅಮಾವಾಸ್ಯೆ ದಿನ ಅನಿಲ್ ವಾಸವಿದ್ದ ಬಾಡಿಗೆ ಮನೆ ಎದುರು ಅಪರಿಚಿತರು ಮಾಟ-ಮಂತ್ರ ಮಾಡಿಸಿದ್ದರಂತೆ. ಈ ವಿಷಯವನ್ನು ಮನೆ ಮಾಲೀಕರು ಅನಿಲ್ ಗಮನಕ್ಕೆ ತಂದಿದ್ದರು. ಆ ವಿಚಾರ ತಿಳಿದ ದಿನದಿಂದ ಅನಿಲ್ ಮಾನಸಿಕವಾಗಿ ಕುಗ್ಗಿ ಹೋಗಿದ್ದನು. ಕೆಲಸವನ್ನು ಸರಿಯಾಗಿ ಮಾಡುತ್ತಿರಲ್ವಂತೆ. ಇತರರ ಜೊತೆಗೂ ಸರಿಯಾಗಿ ಮಾತನಾಡುತ್ತಿರಲಿಲ್ಲ. ನನ್ನ ಜೀವನವೇ ಮುಗಿತು ಎಂದು ಖಿನ್ನತೆಗೊಳಗಾಗಿದ್ದನಂತೆ.
ಅನಿಲ್ ಬಾಂದೇಕರ ಕೆ.ಎಚ್ ಕಂಗ್ರಾಳಿ ಗ್ರಾಮದಲ್ಲಿ ತನ್ನ ಮೂವರು ಮಕ್ಕಳು ಹಾಗೂ ಪತ್ನಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದನು. ಇಂದು ಬೆಳಗ್ಗೆ ಉಪಹಾರ ಸೇವನೆ ಬಳಿಕ ಅನಿಲ್ ಪತ್ನಿ ಜಯಶ್ರೀ ಪುತ್ರನ ಜೊತೆಗೆ ವಿಜಯನಗರದ ತಾಯಿ ಮನೆಗೆ ಹೋಗಿದ್ದಾಳೆ. ಆಗ ಬೆಡ್ ರೂಂ ಬಾಗಿಲು ಹಾಕಿಕೊಂಡು ತನ್ನಿಬ್ಬರು ಹೆಣ್ಣುಮಕ್ಕಳಿಗೆ ಅನಿಲ್ ವಿಷ ಹಾಕಿದ್ದಾನೆ. ಬಳಿಕ ತಾನು ವಿಷ ಸೇವಿಸಿದ್ದಾನೆ.
ಓದಿ: ಬೆಳಗಾವಿ: ಇಬ್ಬರು ಹೆಣ್ಮಕ್ಕಳಿಗೆ ವಿಷ ಉಣಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ತಂದೆ
ಈ ವೇಳೆ ಪತ್ನಿ ಪದೆ ಪದೇ ಫೋನ್ ಕಾಲ್ ಮಾಡಿದರೂ ಅನಿಲ್ ಉತ್ತರಿಸಿಲ್ಲ. ಇದರಿಂದ ಗಾಬರಿಗೊಂಡ ಜಯಶ್ರೀ ತಕ್ಷಣ ಮನೆಗೆ ಬಂದು ಬೆಡ್ ರೂಮ್ ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಗಿಗೆ ಬಂದಿದೆ.
ಅನಿಲ್ ಮನೆಗೆ ಮಾಟ-ಮಂತ್ರ ಮಾಡಿದ ದೃಶ್ಯ ಎದುರಿನ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಮ್ಮ ಕುಟುಂಬಕ್ಕೆ ಕೆಡಕು ಬಯಸಿದವರ ವಿರುದ್ಧ ತಕ್ಕ ಶಿಕ್ಷೆಯಾಗಬೇಕೆಂದು ಜಯಶ್ರೀ ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಕೃತ್ಯ ನಡೆದ ಸ್ಥಳಕ್ಕೆ ಡಿಸಿಪಿ ವಿಕ್ರಮ ಆಮಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.