ಬೆಳಗಾವಿ: ಅನುಮತಿ ಪಡೆಯದೇ ಸಾಗಿಸುತ್ತಿದ್ದ ಬೆಳಗಾವಿ ಡಿಸಿಸಿ ಬ್ಯಾಂಕಿನ 5 ಕೋಟಿ. ರೂ. ಹಣವನ್ನು ಜಿಲ್ಲಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರಾಜ್ಯ ಚುನಾವಣಾ ಆಯೋಗದ ಸೂಚನೆ ಪಾಲನೆ ಮಾಡದೆ ಮತ್ತು ಯಾವುದೇ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ವರ್ಗಾವಣೆ ಮಾಡಲಾಗುತ್ತಿದ್ದ ಬೆಳಗಾವಿ ಡಿಸಿಸಿ ಬ್ಯಾಂಕಿಗೆ ಸಂಬಂಧಿಸಿದ 5 ಕೋಟಿ ರೂ.ಗಳನ್ನು ಗೋಕಾಕ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಯಾದಲಗುಡ್ಡ ಚೆಕ್‌ಪೋಸ್ಟ್ ನಲ್ಲಿ ಪೊಲೀಸ್ ಮತ್ತು ಎಫ್‍ಎಸ್‍ಟಿ ಅಧಿಕಾರಿಗಳ ತಂಡ ವಶಪಡಿಸಿಕೊಂಡಿದೆ. ಜಿಲ್ಲಾಧಿಕಾರಿಗೆ ಈ ಬಗ್ಗೆ ವರದಿ ನೀಡಲಾಗಿದ್ದು, ಹಣವನ್ನು ಗೋಕಾಕ್ ಉಪ ಖಜಾನೆಯ ಭದ್ರತಾ ಕೋಣೆಯಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಖಲೆ ಇಲ್ಲದೇ ಸಾಗಿಸುತ್ತಿದ್ದ 50 ಲಕ್ಷ ರೂ ವಶ: ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ಮಂಗಳವಾರದಂದು ಚಿಕ್ಕೋಡಿ ತಾಲೂಕಿನ ಸದಲಗಾ ಚೆಕ್‌ಪೋಸ್ಟ್‌ನಲ್ಲಿ ಸೂಕ್ತ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ 50 ಲಕ್ಷ ರೂ. ನಗದನ್ನು ವಶಕ್ಕೆ ಪಡೆದಿದ್ದಾರೆ. ಇಲ್ಲಿಯ ಬೋರಗಾಂವ್ ದಿಂದ ಸದಲಗಾ ಪಟ್ಟಣಕ್ಕೆ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಬಳಿ ಹಣ ಸಿಕ್ಕಿದೆ. ಈ ಸಂಬಂಧ ಸದಲಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಹುಕ್ಕೇರಿ ತಾಲೂಕಿನ ಬೈರಾಪುರ ಗ್ರಾಮದ ಚೆಕ್‌ಪೋಸ್ಟ್‌ನಲ್ಲೂ ದಾಖಲೆ ಇಲ್ಲದೆ ಸಾಗಣೆ ಮಾಡುತ್ತಿದ್ದ 3 ಲಕ್ಷ 88 ಸಾವಿರ 500 ರೂ. ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕರ್ನಾಟಕ-ಮಹಾರಾಷ್ಟ್ರ ಗಡಿಯ ಚೆಕ್ಪೊಸ್ಟ್ನಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಎಫ್‍ಎಸ್‍ಟಿ ಕಾರ್ಯಾಚರಣೆ ನಡೆಸಿದ್ದು, ಸೂಕ್ತ ದಾಖಲೆ ಇಲ್ಲದೇ ಲಾರಿಯಲ್ಲಿ ಸಾಗಿಸುತ್ತಿದ್ದ ಸುಮಾರು 2.31 ಲಕ್ಷ ರೂ. ಮೌಲ್ಯದ 10 ಟನ್ ಪಡಿತರ ಅಕ್ಕಿಯನ್ನು ಸಂಕೇಶ್ವರ ಚೆಕ್‌ಪೋಸ್ಟ್‌ನಲ್ಲಿ ವಶಕ್ಕೆ ಪಡೆಯಲಾಗಿದೆ. ಸಂಕೇಶ್ವರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಳಗಾವಿಯ ಸದಲಗಾ ಚೆಕ್‌ಪೋಸ್ಟ್‌ನಲ್ಲಿ ₹50 ಲಕ್ಷ ನಗದು ವಶಕ್ಕೆ