ಬೆಳಗಾವಿ: ಮಹಾಂತೇಶ ನಗರದ ಕಿತ್ತೂರು ಚೆನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸೊಸೈಟಿಯ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಸುಭಾಷ ನಗರ ನಿವಾಸಿ ಮುಜಫರ್ ಶೇಖ್ ಬಂಧಿತ ಆರೋಪಿ. ಡಿ.30 ರಂದು ಆರೋಪಿ ಬ್ಯಾಂಕಿನ ಬಾಗಿಲು ಮುರಿದು ಟ್ರೇಜರಿಯಲ್ಲಿದ್ದ ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದ. ಬ್ಯಾಂಕ್ನಲ್ಲಿ ಕಳ್ಳತನವಾದ ಕುರಿತು ನರೇಂದ್ರ ಬಸವರಾಜ್ ಅವರು ಬೆಳಗಾವಿಯ ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಬೆರಳಚ್ಚು ತಜ್ಞ ಮಹಾದೇವ ಕುಂಬಾರ ಹಾಗೂ ಮಾಳಮಾರುತಿ ಠಾಣೆಯ ಪಿಎಸ್‍ಐ ಹೊನ್ನಪ್ಪ ತಳವಾರ ನೇತೃತ್ವದ ತಂಡ ಆರೋಪಿಯನ್ನು ಖೆಡ್ಡಾಕ್ಕೆ ಕೆಡವಿದೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲ ಪೊಲೀಸ್ ಸಿಬ್ಬಂದಿಯನ್ನು ಅಭಿನಂದಿಸಿರುವ ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್ ಬಹುಮಾನ ಘೋಷಿಸಿದ್ದಾರೆ.
ಬಂಧಿತನಿಂದ 15 ಲಕ್ಷ ರೂ. ಮೌಲ್ಯದ 301 ಗ್ರಾಂ ಚಿನ್ನಾಭರಣ, 1,01,650 ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಆರೂವರೆ ಲಕ್ಷ ಮೌಲ್ಯದ ಹಾರ್ಲೆ ಡೆವಿಡ್ಸನ್ ಬೈಕ್ ಸೇರಿ ಒಟ್ಟು 22,51,650 ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.