ಬೆಳಗಾವಿ: ಅತಿಥಿ ಉಪನ್ಯಾಸಕರು/ಅತಿಥಿ ಶಿಕ್ಷಕರಿಗೆ ಬಾಕಿ ವೇತನ ನೀಡುವುದು ಸೇರಿದಂತೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಣೆ ಮಾಡುವಂತೆ ಆಗ್ರಹಿಸಿ ನಗರದ ಡಿಸಿ ಕಚೇರಿ ಎದುರಿಗೆ ಎಐಡಿವೈಒ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,564 ಅತಿಥಿ ಉಪನ್ಯಾಸಕರು ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಆದ್ರೆ ಸರ್ಕಾರ ಇದುವರೆಗೂ ಸೇವಾ ಭದ್ರತೆ ನೀಡಿಲ್ಲ. ಅಲ್ಲದೆ ಕಳೆದ ಆರೇಳು ತಿಂಗಳಿನಿಂದ ವೇತನ ನೀಡದೆ ಇರುವುದರಿಂದ ಅತಿಥಿ ಉಪನ್ಯಾಸಕರು ಜೀವನ ನಡೆಸುವುದೂ ಕಷ್ಟವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಈ ಕೂಡಲೇ ಬಾಕಿ ವೇತನ ನೀಡಬೇಕು ಎಂದು ಒತ್ತಾಯಿಸಿದರು.
ಅತಿಥಿ ಉಪನ್ಯಾಸಕರು ಹಾಗೂ ಅತಿಥಿ ಶಿಕ್ಷಕರನ್ನು ಕೆಲಸದಿಂದ ತೆಗೆದು ಹಾಕದೆ ಕಾಯಂಗೊಳಿಸಿ ಮುಂದುವರೆಸಬೇಕು. ಖಾಲಿ ಇರುವ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.