ಬೆಳಗಾವಿ: ಅಧಿವೇಶನಕ್ಕೆ ಆಗಮಿಸಿದ ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಕುಣಿಗಲ್ ರಂಗನಾಥ್ ಅವರನ್ನು ಪೊಲೀಸ್ ಅಧಿಕಾರಿಯೊಬ್ಬರು, ನೀವು ಯಾರು ಎಂದು ಕೇಳಿದ ಪ್ರಸಂಗ ಸುವರ್ಣಸೌಧ ಗೇಟ್ ಮುಂದೆ ನಡೆಯಿತು. ಸುವರ್ಣಸೌಧದ ವಿಐಪಿ ಗೇಟ್ ಮೂಲಕ ಅಧಿವೇಶನಕ್ಕೆ ಆಗಮಿಸಿದ್ದ ರಂಗನಾಥ್ ವಿಐಪಿ ಗೇಟ್ ಮುಂದೆ ಅಭಿಮಾನಿಗಳ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ವಿಐಪಿ ಗೇಟ್ ಬಳಿ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪೊಲೀಸ್ ಅಧಿಕಾರಿಯೊಬ್ಬರು ‘‘ಏ ದೂರ ಸರಿಯಿರಿ’’ ಎಂದು ಶಾಸಕರಿಗೆ ಸೂಚನೆ ನೀಡಿದ್ದಾರೆ.
ಇದಕ್ಕೆ ‘‘ನಾನು ಶಾಸಕನಪ್ಪ’’ ಎಂದು ಹೇಳುತ್ತಾ ಪೊಲೀಸ್ ಅಧಿಕಾರಿ ಮೇಲೆ ಗರಂ ಆದರು. ಇದಕ್ಕೆ, ಇನ್ಸ್ಪೆಕ್ಟರ್ ನೀವ್ಯಾರೋ ನನಗೆ ಗೊತ್ತಿಲ್ಲ ಎಂದು ಉತ್ತರಿಸಿದರು. ಇದರಿಂದ ಮತ್ತಷ್ಟು ಕೆರಳಿದ ಶಾಸಕ ರಂಗನಾಥ್, ಗೊತ್ತಿಲ್ಲದಿದ್ದರೆ ತಿಳಿದುಕೊಳ್ಳಬೇಕು ಎಂದು ಪೊಲೀಸ್ ವಿರುದ್ಧ ರೇಗಾಡಿದರು. ಆದರೆ, ಶಾಸಕರ ಮಾತಿಗೆ ಸುಮ್ಮನಿರದ ಪೊಲೀಸ್ ಅಧಿಕಾರಿ, ನಾನ್ಯಾಕೆ ತಿಳಿದುಕೊಳ್ಳಬೇಕು ಎಂದು ಪ್ರತ್ಯುತ್ತರ ನೀಡಿದರು.
ಈ ವೇಳೆ ಮಧ್ಯಪ್ರವೇಶಿಸಿದ ಇತರೆ ಪೊಲೀಸ್ ಸಿಬ್ಬಂದಿ, ಶಾಸಕರನ್ನು ಸಮಾಧಾನಪಡಿಸಿ ಸುವರ್ಣಸೌಧದ ಒಳಗೆ ಕಳುಹಿಸಿಕೊಟ್ಟರು.
ಇದನ್ನೂ ಓದಿ: ಕೋವಿಡ್ ರೂಪಾಂತರಿ ತಳಿಯ ಬಗ್ಗೆ ಸರ್ಕಾರ ಎಚ್ಚರವಹಿಸಿದೆ: ಸಚಿವ ಸುಧಾಕರ್