ಬೆಳಗಾವಿ : ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಬೀಮ್ಸ್) ಆಡಳಿತ ಅಧಿಕಾರಿ ಆಗಿ ಬೆಳಗಾವಿ ವಿಭಾಗೀಯ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲಾ ಬಿಸ್ವಾಸ್ ನೇಮಕ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಇಲ್ಲಿನ ಸುವರ್ಣಸೌಧದಲ್ಲಿ ನಡೆದ ಕೋವಿಡ್ ನಿರ್ವಹಣೆ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೀಮ್ಸ್ ಅವ್ಯವಸ್ಥೆ ಗಮನಕ್ಕೆ ಬಂದಿದೆ. ಹೀಗಾಗಿ, ಐಎಎಸ್ ಅಧಿಕಾರಿಯನ್ನು ಬೀಮ್ಸ್ಗೆ ಆಡಳಿತ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ತಕ್ಷಣವೇ ಜಾರಿಗೆ ಬರುವಂತೆ ಆದಿತ್ಯ ಆಮ್ಲಾ ಬಿಸ್ವಾಸ್ ಅವರಿಗೆ ಬೀಮ್ಸ್ ಹೆಚ್ಚುವರಿ ಹೊಣೆ ನೀಡಲಾಗಿದೆ ಎಂದರು.
30 ಕಿ.ಲೀಟರ್ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆ : ಕೋವಿಡ್ ನಿಯಂತ್ರಣದ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ. ಚಿಕಿತ್ಸೆ, ಲಸಿಕೆಗೆ ಆದ್ಯತೆ ನೀಡಲಾಗಿದೆ. ಪ್ರತಿ ಗ್ರಾಮ ಪಂಚಾಯತ್‌ಗೆ 50 ಸಾವಿರ ರೂ. ಬಿಡುಗಡೆ ಮಾಡಲಾಗಿದೆ. ಬೀಮ್ಸ್ನಲ್ಲಿ ನೂತನವಾಗಿ ಆಕ್ಸಿಜನ್ ಘಟಕ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. 20 ಕಿ.ಲೀ ಆಮ್ಲಜನಕ ಘಟಕ ಸ್ಥಾಪನೆಗೆ ಕ್ರಮಕೈಗೊಳ್ಳಲಾಗಿದೆ. ನಾಳೆಯಿಂದ ದೊಡ್ಡ ಪ್ರಮಾಣದಲ್ಲಿ ಲಸಿಕೆ ರಾಜ್ಯಕ್ಕೆ ಬರಲಿದೆ. ಜಿಲ್ಲಾಸ್ಪತ್ರೆಯಲ್ಲಿ ಮೂಲಸೌಕರ್ಯ ಒದಗಿಸಲು ಕ್ರಮವಹಿಸಲಾಗಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗೆ ತೆರಳಿ ಕೋವಿಡ್ ಪರೀಕ್ಷೆ ನಡೆಸಲು ಸೂಚಿಸಿದ್ದೇನೆ. ಬೆಳಗಾವಿಯಲ್ಲಿ ಕೋವಿಡ್ ಕಂಟ್ರೋಲ್‌ಗೆ ಬಂದಿದೆ. ಇನ್ನಷ್ಟು ಕಂಟ್ರೋಲ್‌ಗೆ ತರುವ ಪ್ರಯತ್ನ ಮಾಡುತ್ತೇನೆ.
ಅನಾಥ ಮಕ್ಕಳಿಗೆ ಪ್ಯಾಕೇಜ್ : ಸಭೆಯಲ್ಲಿ ಶಾಸಕರು ಅನೇಕ ಸಲಹೆ ನೀಡಿದ್ದಾರೆ. 1,175 ಗ್ರಾಮಗಳಿಗೆ ತಂಡ ಭೇಟಿ ನೀಡಿ ಪರೀಕ್ಷೆ ನಡೆಸಲಿದೆ. ಚಿಕ್ಕೋಡಿ ನಗರದಲ್ಲಿ ಕೋವಿಡ್ ಪರೀಕ್ಷಾ ಘಟಕ ಸ್ಥಾಪನೆಗೆ ಅನುಮೋದನೆ ನೀಡಿದ್ದೇನೆ. ಅನಾಥ ಮಕ್ಕಳಿಗೆ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಅನಾಥ ಮಕ್ಕಳ ಜವಾಬ್ದಾರಿ ಸರ್ಕಾರ ತೆಗೆದುಕೊಳ್ಳಲಿದೆ. ಖಾಸಗಿ ಆಸ್ಪತ್ರೆಗಳ ಸುಲಿಗೆ ನಿಯಂತ್ರಣ ಮಾಡಲು ಸಮಿತಿ ರಚನೆ ಮಾಡಲಾಗಿದೆ. ಸುಲಿಗೆ ಮುಂದುವರೆದರೆ ಲೈಸೆನ್ಸ್ ರದ್ದು ಮಾಡಲಾಗುವುದು ಎಂದರು.
ಓದಿ: ಸುದೀರ್ಘ ರಜೆಯಲ್ಲಿ ಡಾ. ದಾಸ್ತಿಕೊಪ್ಪ: ಬೀಮ್ಸ್ಗೆ ಪ್ರಭಾರಿ ನಿರ್ದೇಶಕರ ನೇಮಕ