ಬೆಳಗಾವಿ : ರಜೆಗೆಂದು ಮನೆಗೆ ಬಂದಿದ್ದ ಮಗನನ್ನೇ ಗುಂಡಿಕ್ಕಿ ಕೊಂದ ಪಾಪಿ ತಂದೆಗೆ ಬೆಳಗಾವಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ಜೀವಾವಧಿ ಶಿಕ್ಷೆ ಹಾಗೂ 30 ಸಾವಿರ ರೂ, ದಂಡ ವಿಧಿಸಿ ಆದೇಶಿಸಿದೆ.
ಆರೋಪಿ ವಿಠ್ಠಲ ಇಂಡಿ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಧೀಶ ಬಸವರಾಜ್ ತೀರ್ಪು ಪ್ರಕಟಿಸಿದರು. ಅಭಿಯೋಜಕ ವಿ.ಡಿ. ದರಬಾರೆ ಸರ್ಕಾರದ ಪರ ವಕಾಲತು ವಹಿಸಿದ್ದರು.
ಏನಿದು ಘಟನೆ?
ಬೈಲಹೊಂಗಲ ತಾಲೂಕಿನ ನಯಾನಗರ ಗ್ರಾಮದ ಈರಣ್ಣ ಇಂಡಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ರಜೆಗೆಂದು ಮನೆಗೆ ಬಂದಾಗ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ವಿಠ್ಠಲ ಹಾಗೂ ಈರಣ್ಣ ಮಧ್ಯೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿದೆ. ತಾಳ್ಮೆ ಕಳೆದುಕೊಂಡ ವಿಠ್ಠಲ ತನ್ನ ರಿವಾಲ್ವರ್ನಿಂದ ಪುತ್ರ ಈರಣ್ಣನನ್ನು ಹತ್ಯೆಗೈದಿದ್ದರು. ಗಲಾಟೆ ಬಿಡಿಸಲು ಬಂದ ಪುತ್ರಿ ಪೂಜಾ ಮೇಲೂ ಈತ ಗುಂಡಿನ ದಾಳಿ ನಡೆಸಿದ್ದನು.
ಗಂಭೀರವಾಗಿ ಗಾಯಗೊಂಡಿದ್ದ ಪೂಜಾ ಆಸ್ಪತ್ರೆಗೆ ದಾಖಲಾಗಿ ಗುಣಮುಖರಾಗಿದ್ದರು. 2016 ಡಿಸೆಂಬರ್ 12ರಂದು ನಡೆದ ಘಟನೆ ಕುರಿತು ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಠ್ಠಲ್ಗೆ ಇಬ್ಬರು ಪುತ್ರಿಯರಿದ್ದು, ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿಂಗಾಣಿ ಗ್ರಾಮದ ವಿಠ್ಠಲ ಇಬ್ಬರು ಪತ್ನಿಯರನ್ನು ಹೊಂದಿದ್ದನು. ಮೊದಲನೇ ಹೆಂಡತಿ ಮಲಕವ್ವ ಹಿಂಗಾಣಿ ಗ್ರಾಮದಲ್ಲಿ ಹಾಗೂ ಎರಡನೇ ಹೆಂಡತಿ ಅನುಸೂಯಾ ಬೈಲಹೊಂಗಲ ತಾಲೂಕಿನ ನಯಾನಗರ ಗ್ರಾಮದಲ್ಲಿ ನೆಲೆಸಿದ್ದರು.
ಸೇನೆಯಲ್ಲಿದ್ದ ವಿಠ್ಠಲ ನಿವೃತ್ತಿ ಬಳಿಕ ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಬೈಲಹೊಂಗಲದಲ್ಲಿ ಕೆಲಸ ಮಾಡುವಾಗ ಈತನಿಗೆ ಅನುಸೂಯ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿ ಇಬ್ಬರೂ ಮದುವೆಯಾಗಿದ್ದರು. ಈ ದಂಪತಿಯ ಮೂವರ ಮಕ್ಕಳ ಪೈಕಿ ಹಿರಿಮಗ ಸೇನೆಗೆ ಸೇರಿಕೊಂಡಿದ್ದರು. ಮೊದಲನೇ ಹೆಂಡತಿಗೂ ಓರ್ವ ಮಗನಿದ್ದಾನೆ.