ಬೆಳಗಾವಿ: ಬೇರೊಂದು ಮದುವೆ ಆಗಿದೆ ಎಂದು ನಮ್ಮ ಪತ್ನಿಯರ ಮಾತಿಗೆ ಸಾಥ್ ನೀಡಿದ ಕಟಕೋಳ ಪೊಲೀಸರು ವಿನಾಕಾರಣ ನಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಸಹೋದರರಿಬ್ಬರು ಇಳಿವಯಸ್ಸಿನ ತಂದೆ - ತಾಯಿಗಳು ಹಾಗೂ ಎರಡು ಎತ್ತುಗಳ ಜೊತೆ ಡಿಸಿ ಕಚೇರಿಗೆ ನ್ಯಾಯ ಕೊಡಿಸುವಂತೆ ಬಂದಿರುವ ಘಟನೆ ನಡೆದಿದೆ.
ರಾಮದುರ್ಗ ತಾಲೂಕಿನ ಹುಲುಕುಂದ ಗ್ರಾಮದ ರವಿ ಹಾಗೂ ಸತ್ಯಪ್ಪ ಗಾಣಿಗಿ ಎಂಬ ಅಣ್ಣ - ತಮ್ಮಂದಿರು, ತಮ್ಮ ಹೆಂಡತಿಯರು ಹಾಗೂ ಪೊಲೀಸರ ಮೇಲೆ ಈ ರೀತಿ ಆರೋಪ ಮಾಡುತ್ತಿದ್ದಾರೆ. ಇವರಿಬ್ಬರಿಗೂ ಕಳೆದ ಆರು ವರ್ಷಗಳ ಹಿಂದೆ ಒಂದೇ ಮನೆಯ ಸಹೋದರಿಯರನ್ನು ಹಿರಿಯರ ಒಪ್ಪಿಗೆಯಂತೆ ಮದುವೆ ಮಾಡಿಕೊಂಡು ಮನೆ ತುಂಬಿಸಿಕೊಳ್ಳಲಾಗಿತ್ತು. ಮೊದಮೊದಲು ಚೆನ್ನಾಗಿಯೇ ಇದ್ದ ಇವರು, ನಂತರದ ದಿನಗಳಲ್ಲಿ ಕೌಟಂಬಿಕ ಕಲಹ ಉಂಟಾಗಿ ಇಬ್ಬರು ಹೆಂಡತಿಯರು ಗಂಡನ ಮನೆಗೆ ಬರುವುದನ್ನು ನಿಲ್ಲಿಸುತ್ತಾರೆ.
ಒಂದೆರಡು ಭಾರಿ ಹಿರಿಯರ ಸಮ್ಮಖದಲ್ಲಿ ಜಗಳ ಬಗೆ ಹರಿಸಲಾಗಿತ್ತಾದರೂ ನಂತರ ಮೂರು ವರ್ಷಗಳ ಕಾಲ ತವರು ಮನೆಯಲ್ಲಿಯೇ ಉಳಿದುಕೊಳ್ಳುತ್ತಾರೆ. ಮೂರು ವರ್ಷಗಳ ಕಾಲ ನಮ್ಮನ್ನು ಬಿಟ್ಟು ಹೋದ ಹೆಂಡತಿಯರು ನಮ್ಮ ಜೊತೆಗೆ ಜೀವನ ನಡೆಸಲು ಸಾಧ್ಯವಿಲ್ಲ, ವಿಚ್ಛೇದನ ಕೊಡುವುದಾಗಿ ಹೇಳಿಕೊಂಡಿದ್ದರು. ಆದರೀಗ ಮತ್ತೆ ಮರಳಿ ನಮ್ಮ ಜೊತೆಗೆ ಜೀವನ ನಡೆಸುವುದಾಗಿ ಬಂದಿದ್ದಾರೆ. ಆದರೆ, ನಾವು ಇದಕ್ಕೆ ಒಪ್ಪದಿದ್ದಾಗ ಸ್ಥಳೀಯ ಪೊಲೀಸರು ಹಾಗೂ ಮಹಿಳಾ ಸಂಘಟನೆಗಳಲ್ಲಿ ನಾವು ಎರಡನೇ ಮದುವೆ ಆಗಿದ್ದೇವೆ ಎಂದು ಸುಳ್ಳು ಆರೋಪ ಮಾಡಿದ್ದಾರೆ.
ಓದಿ: ನಾಲ್ವರು ಮಕ್ಕಳು, ಪತ್ನಿಯನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ
ಅಲ್ಲದೇ ಪೊಲೀಸರ ಜೊತೆ ಸೇರಿಕೊಂಡು ನಮ್ಮ ಮೇಲೆ ಹಲ್ಲೆ ಮಾಡಿ, ನಮ್ಮನ್ನು ಊರು ಹಾಗೂ ಮನೆ ಬಿಡಿಸಿ ಅದೇ ಮನೆಯಲ್ಲಿ ಕಳೆದ ಎರಡು ವರ್ಷಗಳಿಂದ ಅವರು ಜೀವನ ನಡೆಸುತ್ತಿದ್ದಾರೆ. ನಾವು ಸುಮಾರು ಎರಡು ವರ್ಷಗಳ ಕಾಲ ಸವದತ್ತಿ ತಾಲೂಕಿನ ಬೆನಕಟ್ಟಿ ಗ್ರಾಮದ ದೇವಾಸ್ಥಾನವೊಂದರಲ್ಲಿ ಉಳಿದುಕೊಂಡು ಬೇರೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದೇವೆ ಎಂದರು.
ಅಲ್ಲದೇ ನಾವು ಹೆಂಡತಿಯರನ್ನು ಬಿಟ್ಟಿದ್ದರೆ ಅಥವಾ ಬೇರೆ ಮದುವೆ ಆಗಿದ್ದರೆ ನಮ್ಮ ಮೇಲೆ ಕೇಸ್ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾದ ಪೊಲೀಸರು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ. ನಾವು ಮನೆ ಬಿಟ್ಟು ಎರಡು ವರ್ಷಗಳಾದರೂ ಈವರೆಗೆ ಮನೆಗೆ ಬಾ ಎಂದು ಒಮ್ಮೆಯೂ ಕರೆದಿಲ್ಲ, ಹೋಗಲು ಪೊಲೀಸರು ಬಿಡುತ್ತಿಲ್ಲ. ಈಗಾಗಲೇ ಸಾಕಷ್ಟು ಚಿತ್ರಹಿಂಸೆ ನೀಡಿರೋ ಅವರು ನಮಗೆ ಬೇಡ. ನಮ್ಮ ಮೇಲೆ ಎರಡನೇ ಮದುವೆ ಆಗಿರುವ ಬಗ್ಗೆ ಸುಳ್ಳು ಆರೋಪ ಮಾಡಿದ್ದಾರೆ. ಈ ಬಗ್ಗೆ ಡಿಸಿ ಅವರಿಗೆ ಮನವಿ ಮಾಡಲು ಬಂದಿದ್ದೇವೆ ಎಂದು ತಿಳಿಸಿದರು.
ಆದರೆ, ಕ್ರಿಸ್ಮಸ್ ನಿಮಿತ್ತ ಸರ್ಕಾರಿ ಕಚೇರಿ ರಜೆ ಇರುವುದರಿಂದ ಈ ಅಣ್ಣ - ತಮ್ಮಂದಿರಿಬ್ಬರು ತನ್ನ ಇಳಿವಯಸ್ಸಿನ ತಂದೆ-ತಾಯಿಗಳೊಂದಿಗೆ ಚಳಿಯಲ್ಲಿಯೇ ಡಿಸಿ ಕಚೇರಿ ಆವರಣದ ಹೊರಗಡೆ ವಾಸ್ತವ್ಯ ಹೂಡುವ ದುಃಸ್ಥಿತಿ ಬಂದಿದೆ. ಯಾವುದೇ ತನಿಖೆಗೂ ತಯಾರಿರುವ ಈ ಅಣ್ಣ ತಮ್ಮಂದಿರ ಕೌಟಂಬಿಕ ಜಗಳವನ್ನ ಬಗೆ ಹರಿಸಬೇಕಾದ ಪೊಲೀಸರು ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪವನ್ನು ಸಹೋದರರಾದ ರವಿ ಹಾಗೂ ಸತ್ಯಪ್ಪ ಮಾಡುತ್ತಿದ್ದಾರೆ.