ಬೆಳಗಾವಿ: ವಿಶೇಷ ಕಾರ್ಯಾಚರಣೆ ನಡೆಸಿದ ರೈಲ್ವೆ ಪೊಲೀಸರು ರೈಲು ಮತ್ತು ನಿಲ್ದಾಣಗಳಲ್ಲಿ ಅಲೆದಾಡುತ್ತಿದ್ದ ಮಹಿಳೆಯರು, ಮಕ್ಕಳು ಸೇರಿದಂತೆ 40 ಜನ ನಿರ್ಗತಿಕರಿಗೆ ನಿರಾಶ್ರಿತರ ಕೇಂದ್ರಗಳಲ್ಲಿ ವಸತಿ ಸೌಲಭ್ಯ ಒದಗಿಸಿದ್ದಾರೆ.
ವಿವಿಧ ಕಾರಣಗಳಿಗೆ ಕುಟುಂಬದಿಂದ ದೂರವಾಗಿ ರೈಲು ನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿ ಅಲೆದಾಡುತ್ತ ಇವರು ಜೀವನ ನಡೆಸುತ್ತಿದ್ದರು. ಒಟ್ಟು 40 ಜನರ ಪೈಕಿ 25 ಮಂದಿಯನ್ನು ವಿಚಾರಣೆಗೆ ಒಳಪಡಿಸಿ, ಬೆಳಗಾವಿ ಮಚ್ಛೆಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಸೇರಿಸಲಾಗಿದೆ. ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿದ್ದ ಐವರು ಮಹಿಳಯರನ್ನು ಖಾಸಭಾಗದ ನಿರ್ಗತಿಕ ಕೇಂದ್ರಕ್ಕೆ ಕಳುಹಿಸಲಾಗಿದೆ.
ಇದನ್ನೂ ಓದಿ: ಕಾಗವಾಡ, ಕುಗನೊಳ್ಳಿ ಚೆಕ್ ಪೋಸ್ಟ್ಗಳಿಗೆ ಜಿಲ್ಲಾಧಿಕಾರಿ, ಎಸ್‌ಪಿ ಭೇಟಿ
ಓರ್ವ ಬಾಲಕ ಮನೆ ಬಿಟ್ಟು ರೈಲಿನಲ್ಲಿ ಓಡಾಡುತ್ತಿದ್ದ. ಆತನನ್ನು ಬೆಳಗಾವಿಯ ಶಿವಾಜಿ ನಗರದ ಬಾಲ ಮಂದಿರದಲ್ಲಿ ಇರಿಸಲಾಗಿದೆ. ಇನ್ನಿಬ್ಬರು ಬಾಲಕರು ಹಾಗೂ ಓರ್ವ ಬಾಲಕಿಯನ್ನು ರಕ್ಷಣೆ ಮಾಡಿರುವ ಪೊಲೀಸರು, ಮಹಾಂತೇಶ ನಗರದ ಮಕ್ಕಳ ಸಹಾಯವಾಣಿ ಕೇಂದ್ರದಲ್ಲಿ ಇರಿಸಿದ್ದಾರೆ. ಓರ್ವ ಮಹಿಳೆ ಇಬ್ಬರು ಮಕ್ಕಳೊಂದಿಗೆ ರೈಲಿನಲ್ಲಿ ಓಡಾಡುತ್ತಿದ್ದರು. ಅವರಿಗೂ ಕೂಡ ಸಹಾಯವಾಣಿ ಕೇಂದ್ರದಲ್ಲಿ ವಸತಿ ಸೌಲಭ್ಯ ಒದಗಿಸಲಾಗಿದೆ.
ಪೊಲೀಸರ ಕಾರ್ಯಾಚರಣೆ ವೇಳೆ 8 ಜನರಲ್ಲಿ ಕೆಟ್ಟ ನಡತೆ ಕಂಡು ಬಂದಿದೆ. ಹಾಗಾಗಿ, ಅವರನ್ನು ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ರೈಲ್ವೆ ನಿಲ್ದಾಣ ಮತ್ತು ರೈಲುಗಳಲ್ಲಿ ಓಡಾಡುವ ಪ್ರಯಾಣಿಕರಿಗೆ ಸಮಸ್ಯೆ ನೋಡಿಕೊಳ್ಳುವ ನಿಟ್ಟಿನಲ್ಲಿ ವಿಶೇಷ ಕಾರ್ಯಾಚರಣೆ ಮಾಡಲಾಗಿದೆ.