ಬೆಳಗಾವಿ: ಮಹಾರಾಷ್ಟ್ರದ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಕಾಗವಾಡ ಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ್ ಅವರ ನಿವಾಸಕ್ಕೆ ಪೊಲೀಸರು ತೆರಳಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿಯಲ್ಲಿರುವ ಶ್ರೀಮಂತ ಪಾಟೀಲರ ನಿವಾಸಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.
ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಅವರ ನಿರ್ದೇಶನದ ಮೇರೆಗೆ ಅಥಣಿ ಡಿವೈಎಸ್ಪಿ ಆರ್.ಎಂ. ಬಸರಗಿ ಹಾಗೂ ಅಥಣಿ ಸಿಪಿಐ ಶೇಖರಪ್ಪ ನೇತೃತ್ವದ ತಂಡ ಸಾಂಗ್ಲಿಗೆ ತೆರಳಿದೆ.
ಶ್ರೀಮಂತ ಪಾಟೀಲ್ ಆಸ್ಪತ್ರೆಗೆ ಹೋಗಿಲ್ಲ, ಕಿಡ್ನಾಪ್ ಮಾಡಿದ್ದಾರೆ ಎಂದು ಸದನದಲ್ಲಿ ಕಾಂಗ್ರೆಸ್ ಆರೋಪ ಮಾಡಿದ ಮೇರೆಗೆ ಈ ಬಗ್ಗೆ ತನಿಖೆ ನಡೆಸುವಂತೆ ಸ್ಪೀಕರ್ ಗೃಹ ಇಲಾಖೆಗೆ ಸೂಚನೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ಬೆಳಗಾವಿ ಪೊಲೀಸರು ಸಾಂಗ್ಲಿಗೆ ಭೇಟಿ ನೀಡಿ ಶ್ರೀಮಂತ ಪಾಟೀಲ್ ಕುಟುಂಬ ಸದಸ್ಯರ ಜೊತೆಗೆ ಚರ್ಚೆ ನಡೆಸಿದರು ಎಂದು ತಿಳಿದುಬಂದಿದೆ.