ಬೆಂಗಳೂರು: ಭಾರಿ ಕುತೂಹಲ ಮೂಡಿಸಿರುವ ಮೂರು ಪಾಲಿಕೆಗಳಾದ ಕಲಬುರಗಿ, ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಮಹಾನಗರ ಪಾಲಿಕೆಗಳಿಗೆ ಇಂದು ಚುನಾವಣೆ ನಡೆಯಲಿದೆ. ಬೆಳಗ್ಗೆ 7ರಿಂದ ಸಂಜೆ 6ಗಂಟೆಯವರೆಗೆ ಮತದಾನ ನಡೆಯಲಿದ್ದು, ಚುನಾವಣಾ ಆಯೋಗ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದೆ.
ಪ್ರಮುಖವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಮೂರು ಪಾಲಿಕೆಯಲ್ಲಿ ನೇರ ಪೈಪೋಟಿ ಇದೆ. ಆದರೆ ಕಲಬುರಗಿಯಲ್ಲಿ ಮಾತ್ರ ಜೆಡಿಎಸ್ ಕಿಂಗ್ ಮೇಕರ್ ಆಗುವ ಸಾಧ್ಯತೆ ಇದೆ. ಬೆಳಗಾವಿಯಲ್ಲಿ 58 ವಾರ್ಡ್ಗಳಿಂದ 385 ಅಭ್ಯರ್ಥಿಗಳು, ಹುಬ್ಬಳ್ಳಿ-ಧಾರವಾಡದಲ್ಲಿ 82 ವಾರ್ಡ್ಗಳಿಂದ 420 ಅಭ್ಯರ್ಥಿಗಳು ಹಾಗೂ ಕಲಬುರಗಿಯಲ್ಲಿ 55 ವಾರ್ಡ್ಗಳಿಂದ 301 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಸೆಪ್ಟೆಂಬರ್ 6ರಂದು ಫಲಿತಾಂಶ ಬಹಿರಂಗಗೊಳ್ಳಲಿದೆ. ವಿಶೇಷವಾಗಿ ಬೆಳಗಾವಿಯಲ್ಲಿ ಇದೇ ಮೊದಲ ಸಲ ಪಕ್ಷಗಳು ಚಿಹ್ನೆ ಆಧಾರದ ಮೇಲೆ ಕಣಕ್ಕಿಳಿದಿವೆ.
ಇದನ್ನೂ ಓದಿರಿ: ಬೆಳಗಾವಿ ಮಹಾನಗರ ಪಾಲಿಕೆ: 58 ವಾರ್ಡ್ಗಳಲ್ಲಿ 385 ಅಭ್ಯರ್ಥಿಗಳು ಕಣದಲ್ಲಿ!
ಧಾರವಾಡದಲ್ಲಿ ಈ ಹಿಂದೆ ಅಧಿಕಾರ ನಡೆಸಿರುವ ಬಿಜೆಪಿ ಮತ್ತೊಮ್ಮೆ ಪಾಲಿಕೆಯನ್ನ ತೆಕ್ಕೆಗೆ ತೆಗೆದುಕೊಳ್ಳಲು ಯೋಜನೆ ರೂಪಿಸಿ, ಪ್ರಚಾರ ನಡೆಸಿದೆ. ಕಲಬುರ್ಗಿಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲು ಸರ್ಕಸ್ ಮಾಡಿದೆ. ಪಾಲಿಕೆಗಳ ಮತದಾನಕ್ಕೆ ಈಗಾಗಲೇ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಕೋವಿಡ್ ಮಹಾಮಾರಿ ನಡುವೆ ಚುನಾವಣೆ ನಡೆಯುತ್ತಿರುವ ಕಾರಣ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.