ಚಿಕ್ಕೋಡಿ: ಈ ಬಾರಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದಲ್ಲಿ ಬರುವಂತಹ ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ, ಕಾಗವಾಡ ತಾಲೂಕಿನಲ್ಲಿ ನೆರೆ ಹಾವಳಿ ಉಂಟಾದರೆ ಅದನ್ನು ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ಸನ್ನದ್ಧವಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಹೇಳಿದರು.
ಚಿಕ್ಕೋಡಿ ಪಟ್ಟಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಈ ಬಾರಿ ನೆರೆ ಹಾವಳಿಗೆ ಜಿಲ್ಲಾಡಳಿತ ಸನ್ನದ್ಧವಾಗಿದ್ದು, ಸಕಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕಳೆದ ವರ್ಷದ ಅನುಭವ ನಮ್ಮ ಜಿಲ್ಲೆಗಿದೆ. ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ಬಗ್ಗೆ ನಿರಂತರ ಮಾಹಿತಿಯನ್ನು ನಾವು ಪಡೆದು ಕೊಳ್ಳುತ್ತಿದ್ದೇವೆ ಎಂದರು.
ಚಿಕ್ಕೋಡಿ ತಾಲೂಕಿನ 7 ಗ್ರಾಮಗಳಲ್ಲಿ ಡಂಗುರ ಸಾರುವ ಮೂಲಕ ಸಂಭವನೀಯ ಪ್ರವಾಹದ ಬಗ್ಗೆ ಜನರಿಗೆ ಮಾಹಿತಿ ನೀಡಲಾಗಿದೆ. ನಿಪ್ಪಾಣಿ ತಾಲೂಕಿನ 3 ಗ್ರಾಮಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈ ಬಾರಿ ಕೋವಿಡ್ ಇರುವ ಕಾರಣ ದೊಡ್ಡದಾದ ಪರಿಹಾರ ಕೇಂದ್ರಗಳ ಸ್ಥಾಪನೆಗೆ ತೀರ್ಮಾನಿಸಲಾಗಿದೆ. ಏಕೆಂದರೆ ,ಪರಿಹಾರ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಪಾಡಬೇಕಿದೆ. ಜೊತೆಗೆ ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯ ಮಾಡಲಾಗುವುದು. ವೈದ್ಯರ ವ್ಯವಸ್ಥೆಯನ್ನು ಕೂಡ ಪರಿಹಾರ ಕೇಂದ್ರದಲ್ಲಿ ಕಲ್ಪಿಸಲಾಗುವುದು ಎಂದರು.
ನದಿ ಪಾತ್ರದ ಪ್ರದೇಶಗಳಲ್ಲಿ ಎಷ್ಟು ಮಳೆಯಾಗುತ್ತಿದೆ ಎಂಬುದರ ಬಗ್ಗೆ ನಿರಂತರವಾಗಿ ಮಾಹಿತಿ ಪಡೆದುಕೊಳ್ಳುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಕೃಷ್ಣಾ ನದಿ ತೀರದಲ್ಲಿ 25 ಬೋಟ್ ವ್ಯವಸ್ಥೆ ಹಾಗೂ ಎನ್‌ಡಿಆರ್‌ಎಫ್ ತಂಡ ನಿಯೋಜಿಸಲಾಗಿದೆ ಎಂದು ಹೇಳಿದರು.