ಬೆಳಗಾವಿ : ಆತ್ಮ ನಿರ್ಭರ ಭಾರತ ಅಭಿಯಾನದಡಿ ಒಂದು ಜಿಲ್ಲೆ; ಒಂದು ಉತ್ಪನ್ನವಾಗಿ ಬೆಳಗಾವಿ ಬೆಲ್ಲವನ್ನು ಆಯ್ಕೆ ಮಾಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಿರೇಮಠ ಹೇಳಿದರು.
ನಗರದ ಜಿಲ್ಲಾಧಿಕಾರಿ ಸಭಾಭವನದಲ್ಲಿ ಆತ್ಮ ನಿರ್ಭರ ಭಾರತ ಅಭಿಯಾನದ ಭಾಗವಾಗಿ ಒಂದು ಜಿಲ್ಲೆ; ಒಂದು ಉತ್ಪನ್ನ/ಬೆಳೆ(ಒನ್ ಡಿಸ್ಟ್ರಿಕ್ಟ್ ಒನ್ ಪ್ರಾಡಕ್ಟ್-ಒಡಿಪಿಒ) ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಕೃಷಿ, ವಾಣಿಜ್ಯ,ಆಹಾರ ಸಂಸ್ಕರಣೆ ಮತ್ತು ಕೃಷಿ ರಫ್ತು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಪ್ರಮುಖ ಕೃಷಿ ಬೆಳೆ ಗುರುತಿಸಿ ಈ ಬೆಳೆಯ ಮೌಲ್ಯವರ್ಧನೆ, ಸಂಸ್ಕರಣೆ, ಪ್ಯಾಕಿಂಗ್, ಬ್ರಾಂಡ್ ಅಭಿವೃದ್ಧಿ, ಮಾರುಕಟ್ಟೆಗೆ ಪ್ರೋತ್ಸಾಹಿಸಲಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಹಾಲು, ಅರಿಷಿಣ, ಮಾವು ಇತ್ಯಾದಿ ಸಂಸ್ಕರಣೆ ಘಟಕಗಳ ಸ್ಥಾಪನೆಗೂ ಉತ್ತಮ ಅವಕಾಶಗಳಿವೆ. ಇವುಗಳಲ್ಲಿ ಮಾವು ಸಂಸ್ಕರಣೆ ಘಟಕಗಳ ಮೂಲಕ ವಿವಿಧ ಉಪ ಉತ್ಪನ್ನಗಳ ತಯಾರಿಕೆಗೂ ವಿಫುಲ ಅವಕಾಶಗಳಿವೆ. ಬೆಲ್ಲ ತಯಾರಿಕಾ ಘಟಕಗಳನ್ನು ಮೊದಲು ಗುರುತಿಸಿ ಎಲ್ಲ ಆಯಾಮಗಳಲ್ಲಿ ಪರಿಶೀಲಿಸಿದ ಬಳಿಕ ಆತ್ಮನಿರ್ಭರ್ ಅಭಿಯಾನದ ಭಾಗವಾಗಿ ಒಂದು ಉತ್ಪನ್ನವಾಗಿ ಆಯ್ಕೆ ಮಾಡಲಾಗುವುದು ಎಂದರು.
ಕೃಷಿಯೇತರ ಜಮೀನಿನಲ್ಲಿ ಸ್ಥಾಪಿತ ಘಟಕಗಳಿಗೆ ಮಾತ್ರ ಸಾಲ ಸೌಲಭ್ಯ ದೊರಕುವುದರಿಂದ ಬೆಲ್ಲ ಅಥವಾ 2ನೇ ಆಯ್ಕೆಯಾಗಿ ಅರಿಷಿಣ ಸಂಸ್ಕರಣಾ ಘಟಕವನ್ನು ಆಯ್ಕೆ ಮಾಡುವಾಗ ನಬಾರ್ಡ್, ಇತರೆ ಹಣಕಾಸು ಸಂಸ್ಥೆಗಳ ಜತೆ ಚರ್ಚಿಸಿದ ಬಳಿಕವೇ ಮತ್ತೊಂದು ಸುತ್ತಿನ ಚರ್ಚೆ ನಡೆಸಿ ಇದರ ಬಗ್ಗೆ ಪರಿಶೀಲಿಸಿ ತೀರ್ಮಾನ ಮಾಡಲಾಗುವುದು. ಆತ್ಮ ನಿರ್ಭರ ಭಾರತ ಅಭಿಯಾನ- ಒಂದು ಜಿಲ್ಲೆ; ಒಂದು ಉತ್ಪನ್ನದ ಉತ್ತೇಜನಕ್ಕೆ ಮೊದಲ ವರ್ಷ ಶೇ.100ರಷ್ಟು ನೆರವು ಕೇಂದ್ರ ಸರ್ಕಾರವೇ ಭರಿಸಲಿರುವುದರಿಂದ ಸಂಬಂಧಿಸಿದ ಎಲ್ಲ ಇಲಾಖೆಯ ಅಧಿಕಾರಿಗಳು ಆದಷ್ಟು ಬೇಗನೆ ವಿಸ್ತೃತ ಯೋಜನೆ ರೂಪಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಹೆಚ್ ವಿ ಮಾತನಾಡಿ, ಮುಂಬರುವ ದಿನಗಳಲ್ಲಿ ಬ್ಯಾಂಕುಗಳಿಂದ ಸರಳವಾಗಿ ಸಾಲ ಸೌಲಭ್ಯ ಒದಗಿಸಲು ಸಾಧ್ಯವಾಗುವಂತಹ ಆಹಾರ ಸಂಸ್ಕರಣಾ ಘಟಕಗಳನ್ನು ಆಯ್ಕೆ ಮಾಡುವುದರಿಂದ ಅಭಿವೃದ್ಧಿ ಸುಲಭವಾಗುತ್ತದೆ. ಕೃಷಿಯೇತರ ಜಮೀನುಗಳಲ್ಲಿ ಸ್ಥಾಪಿತ ಘಟಕಗಳನ್ನು ಆಯ್ಕೆ ಮಾಡಬಹುದು ಎಂದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮನ್ವಯದೊಂದಿಗೆ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ. ಕೃಷಿ ವಲಯದ ಅಸಂಘಟಿತ ಆಹಾರ ಸಂಸ್ಕರಣೆ ಘಟಕಗಳ ಜತೆ ಸಮನ್ವಯ ಸಾಧಿಸಿ ಸೂಕ್ತ ತರಬೇತಿ, ಹಣಕಾಸು ನೆರವು ಒದಗಿಸುವ ಮೂಲಕ ಅವುಗಳ ಪ್ರಗತಿಗೆ ಪ್ರೋತ್ಸಾಹ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡ ಬಸವರಾಜ್, ಕೃಷಿ ಇಲಾಖೆಯ ಉಪ ನಿರ್ದೇಶಕ ಡಾ. ಹೆಚ್ ಡಿ ಕೋಳೇಕರ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರವೀಂದ್ರ ಹಕಾಟಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಹುಲ್ ಇದ್ದರು.