ಬೆಳಗಾವಿ: ಪ್ರವಾಹದಿಂದ ರಕ್ಷಿಸಲಾಗಿರುವ ತಾಲೂಕಿನ ಕಬಲಾಪುರ ಗ್ರಾಮದ ಕಲ್ಲಪ್ಪ-ರತ್ನವ್ವ ದಂಪತಿಯನ್ನು ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಅವರು ಇಂದು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅವರೊಂದಿಗೆ ಮಾತನಾಡಿದ ರತ್ನವ್ವ, ಜೀವರಕ್ಷಣೆಗಾಗಿ ಮನೆಯ ಮೇಲೆ ಕುಳಿತುಕೊಂಡಿದ್ವಿ. ಮನೆಯೂ ನೀರಿನಲ್ಲಿ ಕೊಚ್ಚಿ ಹೋದಾಗ ಇಬ್ಬರೂ ಕೆಳಕ್ಕೆ ಬಿದ್ದಾಗ ನನ್ನ ಸ್ಥಿತಿ ಕಂಡು ಗಂಡ ಅಳತೊಡಗಿದರು. ಆದಾಗ್ಯೂ ಸಾವರಿಸಿಕೊಂಡು ಪಕ್ಕದಲ್ಲೇ ಇದ್ದ ಮಾವಿನ ಮರವನ್ನು ಏರಿದೆವು. ಮೂರು ದಿನಗಳ ಕಾಲ ಉಪವಾಸವಿದ್ದು, ತಮ್ಮನ್ನು ರಕ್ಷಿಸುವಂತೆ ಬುಧವಾರ ರಾತ್ರಿ ಬಾಯಿಯಿಂದ ಸೀಟಿ ಹೊಡೀತಾ ಇದ್ವಿ. ಇಬ್ಬರು ಮಕ್ಕಳಿದ್ದಾರೆ, ಮಗಳ ಮದುವೆಯಾಗಿದ್ದು, ಮಗ ಅಜ್ಜಿಯ ಮನೆಯಲ್ಲಿದ್ದಾನೆ ಎಂದು ರತ್ನವ್ವ ತಮಗಾದ ಕಹಿ ಅನುಭವದ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಈಜು ಬರುತ್ತಿದ್ದರೂ ಪತ್ನಿಯ ಜತೆಯೇ ಮರವೇರಿ ಕುಳಿತ ಪೊಲಿಯೋ ಪೀಡಿತ ಕಲ್ಲಪ್ಪ ಹಾಗೂ ರತ್ನವ್ವ ಅವರ ಧೈರ್ಯವನ್ನು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಡಾ. ರಾಜೇಂದ್ರ ಕೆ.ವಿ. ಮೆಚ್ಚುಗೆ ವ್ಯಕ್ತಪಡಿಸಿದರು. ದಂಪತಿಯ ಆರೋಗ್ಯದಲ್ಲಿ ಸುಧಾರಣೆಯಾಗಿದ್ದು, ಯಾವುದೇ ರೀತಿಯ ಸಮಸ್ಯೆ ಇಲ್ಲ. ಚಳಿಯಿಂದ ರಕ್ಷಣೆ ನೀಡಲು ವಾರ್ಮರ್ ವ್ಯವಸ್ಥೆ ಮಾಡಲಾಗಿದೆ ಎಂದು ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ನಿರ್ದೇಶಕ ಡಾ. ಎಸ್.ಟಿ. ಕಳಸದ ತಿಳಿಸಿದರು. ದಂಪತಿ ಸಂಪೂರ್ಣ ಗುಣಮುಖರಾಗುವವರೆಗೆ ಎಲ್ಲ ಅಗತ್ಯ ಚಿಕಿತ್ಸೆ ಮತ್ತು ಸೌಲಭ್ಯವನ್ನು ಒದಗಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.