ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಸ್ಥಳೀಯ ನಾಯಕರು ಹಾಗೂ ಅಭ್ಯರ್ಥಿಗಳಷ್ಟೇ ಇಂದು ಮತ್ತು ನಾಳೆ ಮನೆ ಮನೆಗೆ ತೆರಳಿ ಪ್ರಚಾರ ನಡೆಸಲಿದ್ದಾರೆ. ಬೆಂಗಳೂರು ಸೇರಿ ಹೊರಗಿನಿಂದ ಪ್ರಚಾರಕ್ಕೆಂದು ಬಂದಿದ್ದ ಸಚಿವರು, ಶಾಸಕರು ಹಾಗೂ ಕಾಂಗ್ರೆಸ್-ಆಪ್ ಮುಖಂಡರು ನಗರದಿಂದ ವಾಪಸ್ ತೆರಳಿದ್ದಾರೆ.
ಪಾಲಿಕೆ ಅಧಿಕಾರ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್, ಬಿಜೆಪಿ, ಆಪ್, ಜೆಡಿಎಸ್, ಎಂಇಎಸ್, ಎಐಎಂಐಎಂ ತೀವ್ರ ಕಸರತ್ತು ನಡೆಸಿದೆ. 58 ವಾರ್ಡ್‌ಗಳಿಗೆ ಸೆಪ್ಟೆಂಬರ್ 3ರಂದು ಮತದಾನ ನಡೆಯಲಿದೆ. 58 ವಾರ್ಡ್‌ಗಳಿಗೆ ಒಟ್ಟು 385 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಬಿಜೆಪಿ 55 ಪ್ಲಸ್ 1 (ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ), ಕಾಂಗ್ರೆಸ್ 45, ಜೆಡಿಎಸ್ 11, ಆಪ್ 27, ಎಐಎಂಐಎಂ 6, ಉತ್ತಮ ಪ್ರಜಾಕೀಯ ಪಕ್ಷ 1, ಎಸ್ಡಿಪಿಐ 1 ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದೆ.
ಪಕ್ಷೇತರರಾಗಿ ಕಣಕ್ಕಿಳಿದ 21 ಅಭ್ಯರ್ಥಿಗಳಿಗೆ ನಾಡದ್ರೋಹಿ ಎಂಇಎಸ್ ಬೆಂಬಲ ಸೂಚಿಸಿದೆ. ಎರಡೂವರೆ ದಶಕಗಳ ಬಳಿಕ ಮೊದಲ ಬಾರಿ ರಾಜಕೀಯ ಪಕ್ಷಗಳು ಪಕ್ಷದ ಚಿಹ್ನೆ ಮೇಲೆ ಸ್ಪರ್ಧೆಗಿಳಿದಿವೆ. ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯಲು ಮ್ಯಾಜಿಕ್ ನಂಬರ್ 32 ಇದ್ದು, ನಗರವಾಸಿಗಳು ಯಾವ ಪಕ್ಷಕ್ಕೆ ಜೈ ಎನ್ನುತ್ತಾರೆ ಎಂಬುವುದೇ ಸದ್ಯದ ಕುತೂಹಲವಾಗಿದೆ.
ಇದನ್ನೂ ಓದಿ: ದೇಶ ವಿರೋಧಿ ಚಟುವಟಿಕೆ ನಡೆಸುವವರ ಮೇಲೆ ಪೊಲೀಸ್ ಇಲಾಖೆ ನಿಗಾ: ಸಿಎಂ