ಬೆಳಗಾವಿ : ಕೋವಿಡ್ ಎರಡನೇ ಅಲೆ ಗಡಿಜಿಲ್ಲೆ ಬೆಳಗಾವಿಯಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ದಿನ ಕಳೆದಂತೆ ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದೆ.
ಹೀಗಾಗಿ, ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ ಸೇರಿದಂತೆ ಖಾಸಗಿ ಆಸ್ಪತ್ರೆಗಳೆಲ್ಲವೂ ಹೌಸ್‍ಫುಲ್ ಆಗಿವೆ. ಹೀಗಾಗಿ, ತೀರಾ ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರು ಆಕ್ಸಿಜನ್ ಬೆಡ್ ಸಿಗದೆ ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕಳೆದ ಎರಡು ವಾರಗಳಿಂದ 500ಕ್ಕೂ ಅಧಿಕ ಕೋವಿಡ್ ಪ್ರಕರಣ ದಾಖಲಾಗುತ್ತಿವೆ. ಹೀಗಾಗಿ, ಕೋವಿಡ್ ಸೋಂಕಿತರ ಆರೈಕೆಗೆ ಜಿಲ್ಲಾಡಳಿತ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಮೀಸಲಿಟ್ಟ ಬೆಡ್‍ಗಳೆಲ್ಲವೂ ಭರ್ತಿ ಆಗಿವೆ. ಆಕ್ಸಿಜನ್ ಬೆಡ್‍ಗಾಗಿ ಜಿಲ್ಲೆಯಲ್ಲಿ ಸೋಂಕಿತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲಾಡಳಿತ ಮೀಸಲಿಟ್ಟ ಬೆಡ್‍ಗಳೆಷ್ಟು?: ಭೌಗೋಳಿಕವಾಗಿ ರಾಜ್ಯದಲ್ಲೇ ಅತಿದೊಡ್ಡ ಎರಡನೇ ಜಿಲ್ಲೆ ಎಂಬ ಕೀರ್ತಿಗೆ ಬೆಳಗಾವಿ ಪಾತ್ರವಾಗಿದೆ. ಬೆಳಗಾವಿಯ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆ ಸೇರಿ ಜಿಲ್ಲೆಯಲ್ಲಿ 1,995 ಆಕ್ಸಿಜನ್ ಬೆಡ್‍ಗಳನ್ನು ಕೋವಿಡ್ ಸೋಂಕಿತರ ಆರೈಕೆಗೆ ಮೀಸಲಿಡಲಾಗಿದೆ.
ಅಲ್ಲದೇ ಲಕ್ಷಣ ರಹಿತ ಸೋಂಕಿತರ ಆರೈಕೆಗಾಗಿ ತಾಲೂಕು ಆಸ್ಪತ್ರೆಗಳಲ್ಲಿ 450 ಬೆಡ್ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 140 ಬೆಡ್‍ಗಳ ವ್ಯವಸ್ಥೆ ಇದೆ. ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಕೂಡ 600 ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಸದ್ಯ 6,687 ಸಕ್ರಿಯ ಪ್ರಕರಣಗಳಿವೆ. ಆದರೆ ಆಕ್ಸಿಜನ್ ಬೆಡ್ ಹೊಂದಿರುವ ಆಸ್ಪತ್ರೆಗಳೆಲ್ಲವೂ ಹೌಸ್‍ಫುಲ್ ಆಗಿವೆ. 1,080 ಬೆಡ್ ಸಾಮರ್ಥ್ಯ ಹೊಂದಿರುವ ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ 350 ಬೆಡ್‍ಗಳನ್ನು ಕೋವಿಡ್ ಸೋಂಕಿತರ ಆರೈಕೆಗೆ ಮೀಸಲಿಡಲಾಗಿದೆ. ಆಕ್ಸಿಜನ್ ಬೆಡ್ ಹೊಂದಿರುವ ಈ ಎಲ್ಲ ಬೆಡ್‍ಗಳು ಭರ್ತಿ ಆಗಿವೆ. ಹಾಗಾಗಿ ಇನ್ನು 200 ಆಕ್ಸಿಜನ್ ಬೆಡ್ ಹೆಚ್ಚಳಕ್ಕೆ ಕ್ರಮ ವಹಿಸಲಾಗಿದೆ.
ಹೋಮ್ ಐಸೋಲೇಶನ್‍ಗೆ ಹೆಚ್ಚಿನ ಆದ್ಯತೆ : ಜಿಲ್ಲೆಯಲ್ಲಿ ಸದ್ಯ 6,687 ಸಕ್ರಿಯ ಪ್ರಕರಣಗಳಿದ್ದರೂ ಶೇ. 70 ರಷ್ಟು ಸೋಂಕಿತರು ಹೋಮ್ ಐಸೋಲೇಶನ್ ಆಗಿದ್ದಾರೆ. ಈ ಎಲ್ಲ ಸೋಂಕಿತರಿಗೆ ಜಿಲ್ಲಾಡಳಿತವೇ ಅಗತ್ಯ ಔಷಧ-ಉಪಚಾರ ನೀಡಿ ನಿಗಾ ವಹಿಸಿದೆ. ಇದರಿಂದ ಜಿಲ್ಲೆಯಲ್ಲಿ ಸಾಮಾನ್ಯ ಬೆಡ್‍ಗಾಗಿ ಆಹಾಕಾರ ಸೃಷ್ಟಿಯಾಗಿಲ್ಲ. ಉಸಿರಾಟ ಸಮಸ್ಯೆ ಹಾಗೂ ತೀರಾ ಸುಸ್ತು ಹೊಂದಿರುವ ಸೋಂಕಿತರು ಮಾತ್ರ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ.
ಕೆಲ ದಿನಗಳ ಕಾಲ ಆಕ್ಸಿಜನ್ ಪೂರೈಕೆಯಲ್ಲಿ ಆದ ವ್ಯತ್ಯಯದಿಂದ ಜಿಲ್ಲೆಯಲ್ಲಿ ಸಮಸ್ಯೆ ಎದುರಾಯಿತು. ಪ್ರಸ್ತುತ ಜಿಲ್ಲೆಗೆ 30 ಕೆಜಿ ಟನ್ ಆಕ್ಸಿಜನ್ ಬೇಡಿಕೆಯಿದ್ದು, ಸದ್ಯ 24 ಕೆಜಿ ಟನ್ ಆಕ್ಸಿಜನ್ ಸರಬರಾಜು ಆಗುತ್ತಿದೆ. ಇದರ ಪ್ರಮಾಣ ಹೆಚ್ಚಿಸಲು ಜಿಲ್ಲಾಡಳಿತ ಕೂಡ ಸರ್ಕಾರಕ್ಕೆ ಪತ್ರ ಬರೆದಿದೆ. ಸರ್ಕಾರ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ.
ವಲಸೆ ಕಾರ್ಮಿಕರ ಆಗಮನ : ಕೋವಿಡ್ ಎರಡನೇ ಅಲೆಗೆ ಇಡೀ ದೇಶವೇ ತಲ್ಲಣಗೊಂಡಿವೆ. ನೆರೆಯ ಮಹಾರಾಷ್ಟ್ರ ಹಾಗೂ ಬೆಂಗಳೂರಿನಲ್ಲಿ ಎರಡನೇ ಅಲೆಯ ಹರಡುವಿಕೆಯೂ ವ್ಯಾಪಕವಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಹಾರಾಷ್ಟ್ರ ಸರ್ಕಾರ ಲಾಕ್‍ಡೌನ್ ಮಾಡಿದ್ರೆ, ಇತ್ತ ರಾಜ್ಯ ಸರ್ಕಾರವೂ ಲಾಕ್‍ಡೌನ್ ಜಾರಿಗೊಳಿಸಿದೆ.
ಕೆಲ ದಿನಗಳಲ್ಲಿ ಮಹಾರಾಷ್ಟ್ರ ಹಾಗೂ ಬೆಂಗಳೂರಿಗೆ ವಲಸೆ ಹೋಗಿದ್ದ ಕಾರ್ಮಿಕರು ಮತ್ತೆ ತವರಿಗೆ ಮರಳಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಳಕ್ಕೆ ವಲಸೆ ಕಾರ್ಮಿಕರ ಆಗಮನವೇ ಮುಖ್ಯ ಕಾರಣ ಎನ್ನಲಾಗುತ್ತಿದೆ.
ಇದನ್ನೂ ಓದಿ: ದ.ಕ.ಜಿಲ್ಲೆಯಲ್ಲಿ ನರ್ಸ್ಗಳ ಕೊರತೆಯಾಗದಂತೆ ಸೂಕ್ತ ಕ್ರಮ: ಜಿಲ್ಲಾ ಆರೋಗ್ಯಾಧಿಕಾರಿ
ಇದಕ್ಕೂ ಮೊದಲು ಕೆಲ ದಿನಗಳ ಕಾಲ ಸವದತ್ತಿಯ ರೇಣುಕಾದೇವಿ ದೇವಸ್ಥಾನದ ಬಾಗಿಲನ್ನು ತೆರೆಯಲಾಗಿತ್ತು. ಹುಣ್ಣಿಮೆಯ ದಿನ 2 ಲಕ್ಷಕ್ಕೂ ಅಧಿಕ ಮಹಾರಾಷ್ಟ್ರದ ಭಕ್ತರು ದೇವಸ್ಥಾನಕ್ಕೆ ಬಂದು ದರ್ಶನ ಪಡೆದು ಹೋದರು. ಈ ಸಂಗತಿಯೂ ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗಲು ಮುಖ್ಯ ಕಾರಣವಾಗಿದೆ ಎಂದು ಡಿಹೆಚ್‍ಒ ಡಾ. ಶಶಿಕಾಂತ ಮುನ್ನಾಳ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.