ಬೆಳಗಾವಿ: ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ದಿನಗಣನೆ ಶುರುವಾಗಿದ್ದು, ಸುವರ್ಣ ವಿಧಾನಸೌಧದ ಮುಂದೆ ತಲೆ ಎತ್ತಿರುವ ಮೂರು ಮಹನೀಯರ ಪ್ರತಿಮೆಗಳ ಸೌಂದರ್ಯೀಕರಣ ಕಾಮಗಾರಿ ಭರದಿಂದ ಸಾಗಿದೆ.
ಹೌದು ವೀರರಾಣಿ ಕಿತ್ತೂರು ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಸಂವಿಧಾನ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಈ ಹಿಂದಿನ ಬಿಜೆಪಿ ಸರ್ಕಾರ ಚುನಾವಣೆಗೂ ಮುನ್ನ ತರಾತುರಿಯಲ್ಲಿ ನಿಲ್ಲಿಸಿ ಲೋಕಾರ್ಪಣೆಗೊಳಿಸಿತ್ತು. ಪ್ರತಿಮೆಗಳ ಸುತ್ತಲೂ ಯಾವುದೇ ರೀತಿ ರಕ್ಷಣಾ ಗೋಡೆ, ಹುಲ್ಲುಹಾಸು, ಬೆಳಕಿನ ವ್ಯವಸ್ಥೆ ಸೇರಿ ಏನೂ ಮಾಡದೇ ಕೇವಲ ಮೂರ್ತಿಗಳನ್ನು ನಿಲ್ಲಿಸಲಾಗಿತ್ತು. ಇದು ಸಾರ್ವಜನಿಕರ ಟೀಕೆಗೂ ಗ್ರಾಸವಾಗಿತ್ತು.
ಆದರೆ, ಈಗ ಹೊಸ ಸರ್ಕಾರ ಬಂದು ಅಧಿವೇಶನಕ್ಕೆ ಸುವರ್ಣ ವಿಧಾನಸೌಧವನ್ನು ಅಂದ ಚಂದಗೊಳಿಸಲು ಮುಂದಾಗಿದೆ. ಅಲ್ಲದೇ ಮೂರು ಮಹನೀಯರ ಪ್ರತಿಮೆಗಳಿಗೆ ಅಲಂಕಾರ ಮಾಡುವ ಕಾಮಗಾರಿ ಕೂಡ ಕೈಗೆತ್ತಿಕೊಳ್ಳಲಾಗಿದ್ದು, ಕಾರ್ಮಿಕರು ಹೊಸದಾಗಿ ಪ್ರತಿಮೆಗಳ ಸ್ವಚ್ಛತೆ, ಬಣ್ಣ ಬಳಿಯುವುದು, ರಕ್ಷಣಾ ಗೋಡೆ ಕಾರ್ಯದಲ್ಲಿ ನಿರತರಾಗಿದ್ದಾರೆ.
ಮೂರೂ ಪ್ರತಿಮೆಗಳ ಸುತ್ತ ಪ್ರತ್ಯೇಕ ವೃತ್ತ, ಕಾಂಪೌಂಡ್ ಕೂಡ ಕಟ್ಟಲಾಗುತ್ತಿದೆ. ಅದರ ಒಳಭಾಗದಲ್ಲಿ ಮಿನಿ ಉದ್ಯಾನ ಸಿದ್ಧಗೊಳ್ಳಲಿದೆ. ಲೈಟಿಂಗ್ ಹಾಗೂ ಮಾಲಾರ್ಪಣೆ ಮಾಡಲು ಅನುಕೂಲ ಆಗುವಂಥ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ. ಪ್ರತಿಮೆಗಳಿಗೆ ಎತ್ತರದ ವಿಶಾಲ ಪೀಠ ಕೂಡ ಇದೆ. ಅದರ ನಾಲ್ಕೂ ಭಾಗದ ಗೋಡೆಗಳಿಗೆ ಆಯಾ ಮಹನೀಯರ ಸಾಧನೆ - ಹೋರಾಟ ಬಿಂಬಿಸುವ ಚಿತ್ರಗಳನ್ನೂ ಬಿಡಿಸಲಾಗುತ್ತಿದೆ. ಈಗಾಗಲೇ ರಾಣಿ ಚೆನ್ನಮ್ಮನ ಆಸ್ಥಾನದ ಕೆಲವು ಚಿತ್ರಗಳನ್ನು ಬಿಡಿಸುವ ಕೆಲಸ ಪೂರ್ಣವಾಗಿದ್ದು, ನೋಡುಗರನ್ನು ಆಕರ್ಷಿಸುತ್ತಿವೆ.
ಸುವರ್ಣ ವಿಧಾನಸೌಧದ ಮುಖ್ಯದ್ವಾರಕ್ಕೆ ಅಭಿಮುಖವಾಗಿ ಪ್ರತಿಷ್ಠಾಪಿಸಿರುವ ಈ ಮೂರು ಮಹನೀಯರ ಪ್ರತಿಮೆಗಳ ಸಂಪರ್ಕಕ್ಕೆ ಈ ಹಿಂದೆ ಸಮರ್ಪಕ ರಸ್ತೆಯೂ ಇರಲಿಲ್ಲ. ಈಗ ಹೆಲಿಪ್ಯಾಡ್‌ನಿಂದ ಆರಂಭವಾಗಿ, ಸೌಧದ ಮುಂಭಾಗಕ್ಕೆ ಬಂದು ಅಲ್ಲಿಂದ ಉತ್ತರ ದ್ವಾರದತ್ತ ಸಾಗಲು ಹೊಸದಾಗಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇಷ್ಟು ದಿನ ಪ್ರತಿಮೆಗಳನ್ನು ನೋಡಲು ಉದ್ಯಾನದಿಂದ ಕೆಳಗಿಳಿದು ಬರಬೇಕಿತ್ತು. ಇನ್ಮುಂದೆ ವಾಹನಗಳು ನೇರವಾಗಿ ಪ್ರತಿಮೆಗಳ ಮುಂದೆಯೇ ತೆರಳಲಿವೆ. ಈ ಮೂರ್ತಿಗಳು ಸೌಧದ ಅಂದ ಹೆಚ್ಚಿಸಲಿವೆ ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಎಸ್.ಸೊಬರದ ತಿಳಿಸಿದರು.
ಮುಂದಿನ ವರ್ಷ ಗಾಂಧೀಜಿ ಪ್ರತಿಮೆ: ಸುವರ್ಣ ವಿಧಾನಸೌಧ ಉತ್ತರ ದ್ವಾರದ ಮುಂಭಾಗದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 27 ಅಡಿ ಎತ್ತರದ ಬೃಹತ್ ಮೂರ್ತಿ ಪ್ರತಿಷ್ಠಾಪನೆಗೂ ಸಿದ್ಧತೆ ನಡೆದಿದೆ. ಆದರೆ, ಇದು ಈ ಅಧಿವೇಶನದೊಳಗೆ ಆಗುವುದಿಲ್ಲ. ಇನ್ನು ಎರಡು ತಿಂಗಳಲ್ಲಿ ಸೌಧದ ಮುಂದೆ ಗಾಂಧೀಜಿ ಕೂಡ ಆಸೀನರಾಗಲಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಒತ್ತಾಯ: ಮಹಾರಾಷ್ಟ್ರದ ಕೈಗಾರಿಕಾ ಅಭಿವೃದ್ಧಿ ಹಾಲಿಡೇ ಕ್ರಮ ಸೂಕ್ತವೇ?