ಬೆಳಗಾವಿ: ವರುಣನ ಅಬ್ಬರದಿಂದ ಬೆಳಗಾವಿ ಜಿಲ್ಲೆ ಅಕ್ಷರಶಹ ನಲುಗಿ ಹೋಗಿದೆ. ದೇವಸ್ಥಾನದಲ್ಲಿನ ದೇವರ ಮೂರ್ತಿ ಸಹ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿರುವ ಘಟನೆ ಗೋಕಾಕ್ ತಾಲೂಕಿನ ಗುಜನಾಳ ಗ್ರಾಮದಲ್ಲಿ ನಡೆದಿದೆ.
ಘಟಪ್ರಭಾ ಜಲಾಶಯದ ಬಿಡಲಾದ ರಭಸದ ನೀರಿಗೆ ಗುಜನಾಳ ಗ್ರಾಮವೇ ಸಂಪೂರ್ಣ ಮುಳುಗಡೆಯಾಗಿದ್ದು. ಸ್ಥಳೀಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇದೇ ವೇಳೆ ಗ್ರಾಮದ ಸರಹದ್ದಿನಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಬಂಡೆಮ್ಮ ದೇವಸ್ಥಾನವೇ ಕೊಚ್ಚಿಕೊಂಡು ಹೋಗಿದ್ದು, ಅಲ್ಲಿಂದ ಬಂಡೆಮ್ಮದೇವಿಯ ಮೂರ್ತಿ ಸುಮಾರು ಎರಡು ಕಿ.ಮೀ ದೂರ ಹೋಗಿದೆ. ಸ್ಥಳೀಯರು ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಗುಜನಾಳ ಗ್ರಾಮದಿಂದ ಅಂಕಲಗಿ ಗ್ರಾಮಕ್ಕೆ ಕೊಚ್ಚಿಕೊಂಡು ಬಂದ ದೇವರ ವಿಗ್ರಹಕ್ಕೆ ಗ್ರಾಮಸ್ಥರು ಪೂಜೆ ಮಾಡಿ ಬರಮಾಡಿಕೊಂಡಿದ್ದರು. ಆದರೆ ಅಂಕಲಗಿ ಗ್ರಾಮಸ್ಥರ ಜೊತೆಗೆ ಗಲಾಟೆ ಮಾಡಿ ಮರಳಿ ಬಂಡೆಮ್ಮ ದೇವಿಯನ್ನು ಗುಜನಾಳ ಗ್ರಾಮಸ್ಥರು ತಮ್ಮ ವಶದಲ್ಲಿ ಇರಿಸಿಕೊಂಡಿದ್ದಾರೆ. ಗ್ರಾಮ ಸಹಜ ಸ್ಥಿತಿಗೆ ಮರಳಿದ ಬಳಿಕ ದೇವಿಯನ್ನು ಪುನರ್ ಸ್ಥಾಪಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.