ಚಿಕ್ಕೋಡಿ: ಸಾಲ ಮಾಡಿ ಬೆಳೆದ ಬಾಳೆಗೆ ಸದ್ಯ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ. ಇದರಿಂದ ಬೇಸತ್ತ ರೈತರು ತಾವೇ ಬೆಳೆದಿರುವ ಬಾಳೆ ಗಿಡಗಳನ್ನು ಕಡಿದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಗಂಗಪ್ಪ ಹಾಗೂ ರಮೇಶ ಎನ್ನುವ ಯುವ ರೈತರು ಬೆಳೆದ ಬಾಳೆ ಬೆಳೆಗೆ ಸರಿಯಾದ ಪ್ರಮಾಣದಲ್ಲಿ ದರ ಸಿಗದೆ ಕಂಗಾಲಾಗಿದ್ದಾರೆ.
ಈ ಸಮಯಕ್ಕೆ ಕಳೆದ ಬಾರಿ ಒಂದು ಟನ್ ಬಾಳೆ ಹಣ್ಣಿಗೆ 12 ರಿಂದ 13 ಸಾವಿರ ಇತ್ತು. ಆದರೆ, ಈ ಬಾರಿ ಮೂರುವರೆ ಸಾವಿರದಿಂದ ನಾಲ್ಕು ಸಾವಿರ ಮಾತ್ರ ಇದೆ. ಈ ಭಾಗದಲ್ಲಿ ಸರಿಯಾದ ಮಾರುಕಟ್ಟೆಗಳಿಲ್ಲ ಬಾಳೆ ಹಣ್ಣನ್ನು ಮಾರುಕಟ್ಟೆಗೆ ಸಾಗಿಸಬೇಕಾದರೆ ಪಕ್ಕದ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆ ಹಾಗೂ ನಮ್ಮ ಬೆಳಗಾವಿ ಜಿಲ್ಲೆಯ ಮಾರುಕಟ್ಟೆಗೆ ಕಳಿಸಬೇಕು. ಹೀಗೆ ಬಾಳೆ ಹಣ್ಣನ್ನು ಮಾರುಕಟ್ಟೆಗೆ ಕಳಿಸಬೇಕಾದರೆ 10 ಟನ್ಗೆ 8 ರಿಂದ 10 ಸಾವಿರ ರೂಪಾಯಿ ಖರ್ಚಾಗುತ್ತದೆ ಎಂದು ಯುವ ರೈತ ರಮೇಶ ಹಳೋಳ್ಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.