ಬೆಳಗಾವಿ: ಗೋಕಾಕ್ನಲ್ಲಿ ಕಮಲ ಅರಳಿಸಲು ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಮಾದರಿಯ ರಣತಂತ್ರ ಹೆಣೆಯಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲೂಕಿನ ಧೂಪದಾಳ ಗ್ರಾಮದಲ್ಲಿ ಇಂದು ರಮೇಶ್ ಜಾರಕೊಹೊಳಿ ಪರ ಮತಯಾಚನೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಿದ್ದರು. ಅದೇ ಮಾದರಿಯನ್ನೇ ಈಗ ಗೋಕಾಕ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಈ ಚುನಾವಣೆಯಲ್ಲಿ ರಮೇಶ್ 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು.
ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಅವರು ರಾಜಕೀಯ ಪ್ರೇರಿತ ಭಾಷಣ ಮಾಡುತ್ತಿದ್ದಾರೆ. ಅವರ ಆರೋಪಕ್ಕೆ ನಾವು ಪ್ರತಿಕ್ರಿಯೆ ನೀಡುವುದಿಲ್ಲ. ಕ್ಷೇತ್ರದ ಮತದಾರರ ಬಳಿ ಹೋಗಿ ನಮ್ಮ ಅಭ್ಯರ್ಥಿ ಬೆಂಬಲಿಸುವಂತೆ ಕೋರುತ್ತಿದ್ದೇವೆ ಎಂದರು.
ರಮೇಶ್ ಜಾರಕಿಹೊಳಿ ಈ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಮೂಲ ಸೌಕರ್ಯ, ನೀರಾವರಿ ಯೋಜನೆ ಜಾರಿಗೊಳಿಸಿದ್ದಾರೆ. ಆದರೆ ತಾನು ಮಾಡಿದ ಕೆಲಸವನ್ನು ರಮೇಶ್ ಸರಿಯಾಗಿ ಜನರಿಗೆ ಹೇಳಿಲ್ಲ. ಅದೇ ಅವರು ಮಾಡಿರುವ ದೊಡ್ಡ ತಪ್ಪು ಎಂದರು.
ಅನರ್ಹ ಶಾಸಕರ ಬಗ್ಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಬಗ್ಗೆ ನಾನೇಕೆ ಪ್ರತಿಕ್ರಿಯೆ ನೀಡಲಿ. ಗೋಕಾಕ್ ಇಲ್ಲವೆ ಅರಭಾಂವಿ ಕ್ಷೇತ್ರಕ್ಕೆ ಬಂದು ಆ ರೀತಿ ಹೇಳಲಿ. ಅದಕ್ಕೆ ಉತ್ತರಿಸುತ್ತೇನೆ ಎಂದರು.
ಸಹೋದರರ ನಡುವಿನ ಪೈಪೋಟಿ ಮೂರನೇ ವ್ಯಕ್ತಿಗೆ ಲಾಭವಾಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮೂರನೇ ವ್ಯಕ್ತಿಗೆ ಲಾಭ ಆಗಲ್ಲ. ಎಲ್ಲಾ ಧರ್ಮದ ಜನರು ನಮ್ಮ ಜೊತೆಗಿದ್ದಾರೆ. ಸಿಎಂ ಯಡಿಯೂರಪ್ಪ ಕೂಡ ಬಿಜೆಪಿ ಬೆಂಬಲಿಸುವಂತೆ ಬಹಿರಂಗ ಸಮಾವೇಶದಲ್ಲಿ ಮನವಿ ಮಾಡಿದ್ದಾರೆ. ಈ ಬಾರಿ ಬಿಜೆಪಿ ಅಭ್ಯರ್ಥಿ ಗೆಲುವು ದಾಖಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.