ಬೆಳಗಾವಿ: ಉಪಚುನಾವಣೆ ಫಲಿತಾಂಶದ ಬಳಿಕ ಜಿಲ್ಲೆಗೆ ಇನ್ನೂ ನಾಲ್ಕು ಸಚಿವ ಸ್ಥಾನ ಸಿಗಲಿವೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಗೆ 2 ಸಚಿವ ಸ್ಥಾನ ದೊರೆತಿವೆ. ಫಲಿತಾಂಶದ ಬಳಿಕ ಉಮೇಶ ಕತ್ತಿ ಸೇರಿ ಮೂವರು ಅನರ್ಹ ಶಾಸಕರಿಗೂ ಸಚಿವ ಸ್ಥಾನ ಸಿಗಲಿವೆ. ಹೆಚ್ಚಿನ ಸಚಿವ ಸ್ಥಾನ ಸಿಗುವುದು ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿ ಆಗಲಿದೆ ಎಂದರು.
ಗೋಕಾಕ ಕ್ಷೇತ್ರದ ಬಹುತೇಕ ಕಡೆ ಪ್ರಚಾರ ಮಾಡಿದ್ದೇವೆ. ಜಿಲ್ಲೆಯ ಹಿರಿಯ ನಾಯಕರಾದ ಉಮೇಶ ಕತ್ತಿ, ಪ್ರಭಾಕರ ಕೋರೆ, ಸುರೇಶ ಅಂಗಡಿ ಸೇರಿ ಎಲ್ಲರೂ ಟೀಂ ವರ್ಕ್ ಮಾಡುತ್ತಿದ್ದೇವೆ. ಹೀಗಾಗಿ ಕ್ಷೇತ್ರದಲ್ಲಿ ಬಿಜೆಪಿ ಪರ ಅಲೆ ಇದೆ. ಗುಪ್ತಚರ ಇಲಾಖೆ ಹಾಗೂ ಖಾಸಗಿ ಸಂಸ್ಥೆಗಳ ವರದಿ ಅನ್ವಯ ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.