ಅಥಣಿ (ಬೆಳಗಾವಿ) : ಬಸ್ ವಿಳಂಬವಾದುದನ್ನು ಪ್ರಶ್ನೆ ಮಾಡಿದ್ದಕ್ಕೆ ಪೊಲೀಸ್ ಸಿಬ್ಬಂದಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಅಥಣಿ ಘಟಕದ ಬಸ್ ಚಾಲಕ ಮತ್ತು ನಿರ್ವಾಹಕ ಸೇರಿ 15ಕ್ಕೂ ಅಧಿಕ ಸಿಬ್ಬಂದಿ, ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಕಾನ್ಸ್ಟೇಬಲ್ ಗಿರಿಮಲ್ಲ ಅಜೂರ ಆರೋಪ ಮಾಡಿದ್ದಾರೆ.
ಈ ಕುರಿತು ಅಥಣಿ ಘಟಕದ ಕೆಎಸ್ಆರ್ಟಿಸಿ ಪ್ರಭಾರಿ ಅಧಿಕಾರಿ ಬಸವರಾಜ ಜಗದಾಳ 'ಈಟಿವಿ ಭಾರತ'ದೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಜಮಖಂಡಿಯಿಂದ ಅಥಣಿಗೆ ಬರುವ ಸಮಯದಲ್ಲಿ ನಮ್ಮ ಚಾಲಕನಿಗೆ ವೇಗವಾಗಿ ಚಲಿಸುವಂತೆ ಕಾನ್ಸ್ಟೇಬಲ್ ಪದೇಪದೆ ಒತ್ತಡ ಹೇರುತ್ತಿದ್ದರು. ಅದರ ಜೊತೆಗೆ ನಾನೇ ಬಸ್ ಚಲಾಯಿಸುತ್ತೇನೆ ಎಂದು ಚಾಲಕನ ಜೊತೆ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ. ಆದರೆ, ನಮ್ಮ ಸಿಬ್ಬಂದಿ ಅವರ ಮೇಲೆ ಹಲ್ಲೆ ಮಾಡಿಲ್ಲ ಎಂದರು.
ನಮ್ಮ ಸಿಬ್ಬಂದಿಗೆ ಅವರು ಹಲ್ಲೆ ಮಾಡಿದ್ದು, ಕೈ ಬೆರಳಿಗೆ ಗಾಯಗಳಾಗಿವೆ. ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ. ಜಮಖಂಡಿಯಿಂದ ಅಥಣಿಗೆ ಬರುವ ಬಸ್ನಲ್ಲಿರುವ ಪ್ರಯಾಣಿಕರು, ಆತನ ಅಸಭ್ಯ ವರ್ತನೆಗೆ ಧರ್ಮದೇಟು ನೀಡಿದ್ದಾರೆ ಎಂದು ತಿಳಿಸಿದರು.
ಹಲ್ಲೆಗೊಳಗಾದ ಕಾನ್ಸ್ಟೇಬಲ್ ಅಥಣಿ ತಾಲೂಕಿನ ಶಿವನೂರ ಗ್ರಾಮದವರಾಗಿದ್ದು, ಬೆಳಗಾವಿಯಲ್ಲಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.