ಚಿಕ್ಕೋಡಿ: ಮಹಾರಾಷ್ಟ್ರ ಗಡಿಭಾಗದ ಅಥಣಿ, ಕಾಗವಾಡ ತಾಲೂಕುಗಳು ರಾಜ್ಯ ರಾಜಕಾರಣದಿಂದ ಹಿಡಿದು ಬರಗಾಲ, ಅತಿವೃಷ್ಟಿ, ಅನಾವೃಷ್ಟಿ ಹೀಗೆ ಒಂದಿಲ್ಲೊಂದು ಸಮಸ್ಯೆಗಳಿಂದ ನಿರಂತರ ಸುದ್ದಿಯಲ್ಲಿರುತ್ತವೆ. ಇತ್ತೀಚೆಗಂತೂ ಬೆಳಗಾವಿಯ ಅಥಣಿ, ಕಾಗವಾಡ ಶಾಸಕರು ದಿನಾಲೂ ಸುದ್ದಿಯಲ್ಲಿದ್ದಾರೆ. ಆದರೆ, ಹೀರೋಗಳಾಗಿರುವ ಶಾಸಕರು ಇಲ್ಲಿನ ರೈತರ ಸಮಸ್ಯೆಗಳನ್ನು ಮಾತ್ರ ಮೂಲೆಗೆ ತಳ್ಳಿದ್ದಾರೆ.
ಹೌದು. ಕಾಗವಾಡ, ಅಥಣಿ ಶಾಸಕರಾದ ಶ್ರೀಮಂತ ಪಾಟೀಲ ಹಾಗೂ ಮಹೇಶ ಕುಮಟಳ್ಳಿ ಅವರಿಗೆ ತಮ್ಮ ಭಾಗದ ಜನರ ಗೋಳು ಕೇಳಲು ಸಮಯ ಇಲ್ಲದಂತಾಗಿದೆ. ಈ ತಾಲೂಕುಗಳಲ್ಲಿ ಭೀಕರ ಬರಗಾಲದಿಂದ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಘಟ್ಟ ಪ್ರದೇಶದಲ್ಲಿ ಆಗಿರುವ ಮಳೆಯಿಂದ ಕೃಷ್ಣಾ ನದಿ ಮೈತುಂಬಿ ಹರಿಯುತ್ತಿದೆ. ರೈತರ ಅನುಕೂಲಕ್ಕಾಗಿ ಅಥಣಿಯ ಹಳ್ಯಾಳ ಏತ ನೀರಾವರಿ ಹಾಗೂ ಕಾಗವಾಡದ ಐನಾಪೂರ ಏತ ನೀರಾವರಿ ಮೂಲಕ ಕಾಲುವೆಗಳಿಗೆ ನೀರು ಬಿಡಲಾಗಿದೆ. ಆದರೆ, ಉಪ ಕಾಲುವೆಗಳಿಗೆ ನೀರು ಬಾರದ ಕಾರಣ ಬೆಳೆಗಳು ಕೈಗೆ ಸಿಗದಂತಾಗುತ್ತಿವೆ.
ನೀರು ಎಲ್ಲಿ ಹೋಯಿತು?: ಬಾವಿ, ಕೊಳವೆ ಬಾವಿ ಹಾಗೂ ಬೆಳೆದ ಬೆಳೆಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಕಾಲುವೆಗಳಿಗೆ ನೀರು ಬಿಡಲಾಗಿದೆ. ಆ ನೀರನ್ನು ಉಪ ಕಾಲುವೆಗಳಿಗೆ ಹರಿಸಿದ್ದರೆ, ರೈತರ ಮೊಗದಲ್ಲಿ ನಗು ಬೀರುತ್ತಿತ್ತು. ಆದರೆ, ಅದು ಸಾಧ್ಯವಾಗದ ಕಾರಣ ರೈತರು ಕಣ್ಣೀರಿನಲ್ಲಿ ಮುಖ ತೊಳೆಯುತ್ತಿದ್ದಾರೆ. ಕಾರಣ ಇಷ್ಟೆ. ಕಾಲುವೆಯ ನೀರಿಗೆ ಕೆಲ ರೈತರು ಪೈಪ್ಲೈನ್ ಅಳವಡಿಸಿ ತಮ್ಮ ಗದ್ದೆಗಳಿಗೆ ನೀರು ಹರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಉಪಕಾಲುವೆ ವ್ಯಾಪ್ತಿಯ ರೈತರಿಗೆ ನೀರಿಲ್ಲದಂತಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ: 15 ದಿನಗಳ ಹಿಂದೆ ಕಾಲುವೆಗಳಿಗೆ ನೀರು ಬಿಡಲಾಗಿದೆ. ಕಾಲುವೆಗಳಿಗೆ ಅಳಡಿಸಿರುವ ಪೈಪ್ಲೈನ್ ತೆರವುಗೊಳಿಸಬೇಕಾದ ಅಧಿಕಾರಿ ವರ್ಗ ಕೈಕಟ್ಟಿ ಕುಳಿತಿದೆ. ಈ ಎಲ್ಲ ಮಾಹಿತಿ ಗೊತ್ತಿದ್ದರೂ ಉಪಕಾಲುವೆಗಳಿಗೆ ನೀರು ಬಿಡಿಸಲು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಮೋಳೆ, ಕೆಂಪವಾಡ, ಕೌಲಗುಡ್ಡ, ನವಲಿಹಾಳ, ಮುರಗುಂಡಿ ಗ್ರಾಮಗಳ ರೈತರು ಹಿಡಿಶಾಪ ಹಾಕುತ್ತಿದ್ದಾರೆ.
ಇಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬಿದ್ದಿದೆ. ನೀರಿಲ್ಲದೆ ಬೆಳೆಗಳು ಒಣಗಿವೆ. ಈ ಉಪ ಕಾಲುವೆಗಳಿಗೆ ನೀರು ಹರಿದರೆ ಬೆಳೆಗಳಿಗೆ ಜೀವ ಬರುತ್ತದೆ ಎಂದು ರೈತರು ತಿಳಿಸುತ್ತಾರೆ. ಎರಡು ವರ್ಷದಲ್ಲಿ ಸಕಾಲಕ್ಕೆ ಮಳೆಯಾಗದೆ ಬೆಳೆದ ಬೆಳೆಗಳು ಕೈಗೆ ಸಿಗದ ಕಾರಣ, ನಷ್ಟ ಅನುಭವಿಸುವಂತಾಗಿದೆ. ಈ ವರ್ಷವೂ ವರುಣ ಕೃಪೆ ತೋರಿಲ್ಲ. ಹಾಗೂ ಉಪಕಾಲುವೆಗಳಿಗೆ ನೀರು ಬಿಡದಿದ್ದರೆ ಈ ಭಾಗದ ರೈತರು ಗುಳೆ ಹೋಗಬೇಕಾಗುತ್ತದೆ ಎಂದು 'ಈಟಿವಿ ಭಾರತ್' ಜೊತೆ ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.