ಬೆಂಗಳೂರು/ಬೆಳಗಾವಿ: 2022ನೇ ಸಾಲಿನ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕೃತಗೊಂಡಿತು. ವಿಧೇಯಕದ ಮೂಲಕ ಕೈಗಾರಿಕಾ ಪ್ರದೇಶದಲ್ಲಿ ವಸೂಲಿಯಾಗುವ ತೆರಿಗೆಯಲ್ಲಿ ಶೇ.30ರಷ್ಟನ್ನು ಸ್ಥಳೀಯ ಸಂಸ್ಥೆಗಳಿಗೆ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ನೀಡಲಾಗುತ್ತದೆ. 1,250 ಎಕರೆ ಮೇಲ್ಪಟ್ಟ ಮೆಗಾ ಕೈಗಾರಿಕಾ ಪಾರ್ಕ್ ನಿರ್ವಹಣೆ, ಅಭಿವೃದ್ಧಿಗಾಗಿ ಪ್ರಾಧಿಕಾರ ರಚಿಸಲಾಗುವುದು. ಇದರಿಂದ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿವರಿಸಿದರು.
ವಿಧೇಯಕಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ಆರ್.ವಿ. ದೇಶಪಾಂಡೆ, ಈ ಬಿಲ್ ಅಂಗೀಕಾರ ಆದರೂ ಅದು ಯಾವುದೇ ಲಾಭ ತರುವುದಿಲ್ಲ. ನನ್ನ ಪ್ರಕಾರ, ಈ ಬಿಲ್ ಕಾನೂನು ಪರಿಶೀಲನೆ ಆಗಿಲ್ಲ. ಕಾನೂನು ಕೆಐಎಡಿಬಿ ಕಾಯ್ದೆಯನ್ನು ಓವರ್ ರೂಲ್ ಮಾಡುತ್ತದೆ. 1,250 ಎಕರೆ ಮೇಲಿರುವ ಪ್ರದೇಶದಲ್ಲಿನ ಕೈಗಾರಿಕೆಗಳಿಗೆ ಮಾತ್ರ ಈ ಕಾಯ್ದೆ ಅನ್ವಯವಾಗುತ್ತದೆ. ಈ ಕಾಯ್ದೆ ಅನುಷ್ಠಾನವೇ ಕಷ್ಟ ಸಾಧ್ಯವಿದೆ. ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಅಧಿಕಾರ ತೆಗೆದು ವಿಶೇಷ ಹೂಡಿಕೆದಾರರ ಪ್ರಾಧಿಕಾರಕ್ಕೆ ನೀಡಲಾಗಿದೆ. ಈ ವಿಧೇಯಕ ವಾಪಸ್ ಪಡೆದು ಕೆಲ ಬದಲಾವಣೆ ಮಾಡಿ ಜಾರಿಗೆ ತನ್ನಿ ಎಂದು ಆಗ್ರಹಿಸಿದರು.
ಇದೇ ವೇಳೆ ಸ್ಪಷ್ಟನೆ ನೀಡಿದ ಸಿಎಂ ಬೊಮ್ಮಾಯಿ, ನೀವು ಸಚಿವರಾಗಿದ್ದಾಗ ಎಲೆಕ್ಟ್ರಾನಿಕ್ ಸಿಟಿ ಮಾಡಲು ನಗರಾಭಿವೃದ್ಧಿ ಕಾಯ್ದೆಗೆ ತಿದ್ದುಪಡಿ ತಂದಿದ್ದೀರಿ. ಅದರಲ್ಲಿ ಎಲ್ಲಾ ನಿರ್ವಹಣೆ, ಅಭಿವೃದ್ಧಿಯನ್ನು ಪ್ರಾಧಿಕಾರ ಮಾಡುತ್ತದೆ. 30% ಸಂಗ್ರಹಿಸಿದ ತೆರಿಗೆಯ ಲಾಭವನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಲಾಗುತ್ತದೆ. ಅದನ್ನೇ ಇಲ್ಲಿ ಮಾಡಲಾಗಿದೆ. ನೀವು ಮಾಡಿದ ಆ ತಿದ್ದುಪಡಿ ಯಶಸ್ವಿಯಾಗಿದೆ. ಅದೇ ಮಾದರಿಯ ಕಾನೂನನ್ನು ರಾಜ್ಯದಲ್ಲಿ ತರಲಾಗುತ್ತಿದೆ ಎಂದರು.
1,250 ಎಕರೆ ಮೇಲ್ಪಟ್ಟ ಮೆಗಾ ಕೈಗಾರಿಕಾ ಪಾರ್ಕ್ನಲ್ಲಿ ಇದನ್ನು ಮಾಡಲಾಗುತ್ತಿದೆ. ಇದರಿಂದ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ. ಕೆಐಎಡಿಬಿಯ ಅಧಿಕಾರವನ್ನು ತೆಗೆದು ಹಾಕಿಲ್ಲ. ಕೆಐಎಡಿಬಿನೇ ಇಲ್ಲಿ ಅಂತಿಮ. ಇದಕ್ಕೆ ನೀವು ವಿರೋಧ ವ್ಯಕ್ತಪಡಿಸಬಾರದು. ನೀವು ಈ ಕಾಯ್ದೆಯನ್ನು ಸ್ವಾಗತ ಮಾಡಬೇಕು. ನಿಮ್ಮ ರೋಲ್ ಮಾಡೆಲ್ ತಿದ್ದುಪಡಿಯಿಂದ ಎಲೆಕ್ಟ್ರಾನಿಕ್ ಸಿಟಿ ಟೌನ್ ಶಿಪ್ ಅತ್ಯತ್ತಮವಾಗಿದೆ. ಅದೇ ಮಾಡೆಲ್ ಅನ್ನು ಇಡೀ ರಾಜ್ಯಕ್ಕೆ ವಿಸ್ತರಿಸುತ್ತಿದ್ದೇವೆ ಎಂದು ಮನವರಿಕೆ ಮಾಡಿದರು.
ಬಳಕೆಯಾಗದ ಕೈಗಾರಿಕಾ ಭೂಮಿ ವಾಪಸ್: ಹಿಂದೆ ಹಂಚಿಕೆ ಆದ ಭೂಮಿ ದುರ್ಬಳಕೆಯಾಗಿದೆ. ಕೆಲವು ಕಡೆ ಕೈಗಾರಿಕೆಗಳು ಇನ್ನೂ ಆರಂಭವೇ ಮಾಡಿಲ್ಲ. ಈ ಹಿನ್ನೆಲೆ ಸಂಪೂರ್ಣ ಲ್ಯಾಂಡ್ ಆಡಿಟ್ ಮಾಡಲು ನಿರ್ದೇಶನ ನೀಡಿದ್ದೇನೆ. ವಾಟರ್ ಹಂಚಿಕೆಯಾಗಿದ್ದರೂ ಕೈಗಾರಿಕೆಗಳು ಸ್ಥಾಪನೆ ಮಾಡಿಲ್ಲ. ಅವರಿಗೆ ಹಂಚಿಕೆಯಾದ ನೀರೂ ಬ್ಲಾಕ್ ಆಗಿದೆ. ಅದರ ಬಗ್ಗೆನೂ ಆಡಿಟ್ ಮಾಡಲು ಆದೇಶ ಕೊಟ್ಟಿದ್ದೇನೆ ಎಂದರು.
ಇದನ್ನೂ ಓದಿ: ಪರಿಷತ್ನಲ್ಲಿ ಎಸ್ಸಿ-ಎಸ್ಟಿ ಮಸೂದೆ ಮಂಡನೆ; 9ನೇ ಶೆಡ್ಯೂಲ್‌ಗೆ ಸೇರಿಸುವಂತೆ ವಿಪಕ್ಷಗಳ ಆಗ್ರಹ
ಇದೇ ವೇಳೆ ಬಿಜೆಪಿ ಸದಸ್ಯ ಸೋಮಶೇಖರ ರೆಡ್ಡಿ, ಯಡಿಯೂರಪ್ಪ ಆಡಳಿತದಲ್ಲಿ ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಜಿಂದಾಲ್ ಕುಡ್ತಿನಿ ಪ್ರದೇಶದಲ್ಲಿ ಮಿತ್ತಲ್ಗೆ ಸುಮಾರು 8,000 ಎಕರೆ ಭೂಮಿ ನೀಡಲಾಗಿತ್ತು. ಅವರು ಇನ್ನೂ ಕೈಗಾರಿಕೆ ಆರಂಭಿಸಿಲ್ಲ. ಎನ್ಎಂಟಿಸಿಯವರೂ ಇನ್ನೂ ಕೈಗಾರಿಕೆ ಪ್ರಾರಂಭಿಸಿಲ್ಲ ಎಂದು ದೂರಿದರು.
ಇದಕ್ಕೆ ಉತ್ತರಿಸಿದ ಸಿಎಂ, ಜಿಂದಾಲ್ ಕುಡ್ತಿನಿಯಲ್ಲಿ 5,000 ಎಕರೆ ಆರ್ಸೆನಲ್ ಮಿತ್ತಲ್ ಜಮೀನು ಬಳಕೆಯಾಗಿಲ್ಲ. ಅದನ್ನು ವಾಪಸ್ ಪಡೆದುಕೊಳ್ಳುತ್ತೇವೆ. ಈಗಾಗಲೇ ಕಂಪನಿಯವರಿಗೆ ನೋಟಿಸ್ ನೀಡಲಾಗಿದೆ. ಉತ್ತಮ್ ಗಾಲ್ವಾ ಅವರಿಗೂ ನೋಟಿಸ್ ಕೊಡಲಾಗಿದ್ದು, ಆರು ತಿಂಗಳು ಸಮಯಾವಕಾಶ ಕೇಳಿದ್ದರು. ಆದರೆ ಅದು ಮುಗಿದಿದೆ. ಅದನ್ನೂ ನಾವು ವಾಪಸ್ ಪಡೆಯುತ್ತೇವೆ. ಕಾನೂನು ಪ್ರಕಾರ ಯಾರು ಮಾಡಬೇಕು ಅವರು ಮಾಡಬೇಕು, ಮಾಡಿಲ್ಲ ಅಂದ್ರೆ ಹಂಚಿಕೆಯಾದ ಜಮೀನನ್ನು ವಾಪಸ್ ಪಡೆಯುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಉಗ್ರರ ಪರ ಹೇಳಿಕೆ ಕೊಡಲು ನನಗೇನು ತಲೆ ಕೆಟ್ಟಿದೆಯಾ?-ಡಿಕೆಶಿ, ಕ್ಷಮೆ ಕೇಳುವಂತೆ ಸಿ.ಟಿ.ರವಿ ಆಗ್ರಹ