ಬೆಳಗಾವಿ: ಕಂದಾನಗರಿಯ ಉರಗಪ್ರೇಮಿಯೊಬ್ಬರು ಹಾವಿನ ಮೊಟ್ಟೆಗೆ ಕೃತಕವಾಗಿ ಕಾವು ಕೊಟ್ಟು ಸುರಕ್ಷಿತ ಜನನ ಮಾಡಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಬೆಳಗಾವಿ ತಾಲೂಕಿನ ಹಲಗಾ ಬಸ್ತವಾಡ ಗ್ರಾಮದ ರಾಮಾ ಪಾಟೀಲ್ ಎಂಬ ಉರಗ ಪ್ರೇಮಿ ಹಾವಿನ ಮರಿಗಳ ಸುರಕ್ಷಿತ ಜನನಕ್ಕೆ ಕಾರಣರಾಗಿದ್ದಾರೆ.
ಹಾವು ಕಂಡ ತಕ್ಷಣ ಭಯದಿಂದ ಮಾರುದ್ದ ಓಡುವ ಜನರ ಮಧ್ಯೆ ಅವುಗಳನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡು ಕಾಪಾಡುವ ಮೂಲಕ ಪ್ರಾಣಿ ಪ್ರೀತಿ ಮೆರೆದಿದ್ದಾರೆ. ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ರಾಮಾ ಪಾಟೀಲ, ಎರಡು ತಿಂಗಳ ಹಿಂದೆ ರಾತ್ರಿ ಹೊತ್ತು ನಾಗರ ಹಾವನ್ನು ರಕ್ಷಿಸಿ ಮನೆಗೆ ತಂದಿದ್ದೆ. ಬೆಳಗ್ಗೆ ನೋಡಿದರೆ 20 ಮೊಟ್ಟೆಗಳನ್ನು ಆ ಹಾವು ಹಾಕಿತ್ತು. ಈ ಮೊಟ್ಟೆಗಳನ್ನು ಎಲ್ಲಿಯೂ ಬಿಸಾಕುವುದು ಬೇಡವೆಂದು ಮನೆಯಲ್ಲೇ ಪ್ರಯೋಗ ಮಾಡಬೇಕೆಂದು ನಿಶ್ಚಯಿಸಿದೆವು. ಬಳಿಕ ನಾಗರ ಹಾವನ್ನು ಕಾಡಿಗೆ ಬಿಟ್ಟು ಬಂದಿದ್ದೆ. 20 ಮೊಟ್ಟೆಗಳನ್ನು ಒಂದು ಚೀಲದಲ್ಲಿ ಹಾಕಿ 30-40 ಡಿಗ್ರಿ ಉಷ್ಣಾಂಶ ಕೊಟ್ಟೆವು.
ಯಶಸ್ವಿಯಾದ ಪ್ರಯೋಗ.. ನಿರಂತರವಾಗಿ 55-60 ದಿನಗಳ ಕಾಲ ಈ ರೀತಿ ಮೆಂಟೇನ್ ಮಾಡಿದ ನಂತರ ಒಂದೊಂದೆ ಮರಿ ಮೊಟೆ ಒಡೆದು ಹೊರ ಬಂದವು. ಅಂತಿಮವಾಗಿ ನಾಲ್ಕು ದಿನಗಳಲ್ಲಿ 12 ಮರಿಗಳನ್ನು ಹೊರಗೆ ತೆಗೆಯಲಾಗಿದ್ದು, ಇನ್ನುಳಿದವು ಸತ್ತು ಹೋದವು. ನಮ್ಮ ಪ್ರಯೋಗ ಯಶಸ್ವಿಯಾಗಿದ್ದನ್ನು ನೋಡಿ ಬಹಳಷ್ಟು ಸಂತಸವಾಯ್ತು ಎಂದು ಸಂತಸ ವ್ಯಕ್ತಪಡಿಸಿದರು. ಈ ಹಾವಿನ ಮರಿಗಳನ್ನು ಕಾಡಿಗೆ ಹೋಗಿ ಬಿಟ್ಟು ಬಂದಿದ್ದೇನೆ. ಯಾರಿಗಾದರೂ ಈ ರೀತಿ ಹಾವಿನ ಮೊಟ್ಟೆಗಳು ಸಿಕ್ಕರೆ ಯಾರೂ ಬಿಸಾಡಬೇಡಿ. ಕ್ಯಾರಿಬ್ಯಾಗ್, ಬಾಕ್ಸ್ ಇಲ್ಲವೇ ಬಕೇಟ್ನಲ್ಲಿ ಆ ಮೊಟ್ಟೆಗಳನ್ನು ಹಾಕಿ ಬಿಗಿಯಾಗಿ ಪ್ಯಾಕ್ ಮಾಡಬೇಕು. 30-40 ಡಿಗ್ರಿ ಉಷ್ಣಾಂಶವನ್ನು ನಿರಂತರವಾಗಿ 60 ದಿನ ಕೊಟ್ಟರೆ ಮೊಟ್ಟೆಯಿಂದ ಹಾವಿನ ಮರಿಗಳು ಹೊರಗೆ ಬರುತ್ತವೆ ಎಂದು ರಾಮಾ ಪಾಟೀಲ ಮಾಹಿತಿ ನೀಡಿದರು.
ಇನ್ನು, 10 ವರ್ಷಗಳಿಂದ ಹಾವು ಹಿಡಿಯುವ ಕೆಲಸ ಮಾಡುತ್ತಿದ್ದೇನೆ. ರಾತ್ರಿ, ಹಗಲು ಎನ್ನದೇ ನನ್ನ ಮೊಬೈಲ್ಗೆ ಕರೆ ಮಾಡಿದ ತಕ್ಷಣವೇ ಹೋಗಿ ಹಾವನ್ನು ರಕ್ಷಿಸುತ್ತಿದ್ದೇನೆ. ಬಳಿಕ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿ, ಹಾವನ್ನು ಕಾಡಿಗೆ ಬಿಟ್ಟು ಬರುತ್ತೇನೆ. ಇಲಿಗಳಿಂದಾಗಿ ಹಾವುಗಳು ಮನೆಗಳಿಗೆ ಬರುತ್ತವೆ. ಹೀಗಾಗಿ ಹಾವು ಬಂದರೆ ಅವುಗಳನ್ನ ಕೊಲ್ಲದೇ ತಮಗೆ ಗೊತ್ತಿರುವ ಉರಗ ತಜ್ಞರಿಗೆ ತಿಳಿಸಿ ಎಂದು ಮನವಿ ಮಾಡಿದರು.
ನಾಲ್ಕು ಹಾವು ಮಾತ್ರ ವಿಷಪೂರಿತ: ಹಾವಿನ ಬಗ್ಗೆ ಭಯ ಯಾವತ್ತೂ ಹೋಗುವುದಿಲ್ಲ. ಆದರೆ ಬೆಳಗಾವಿ ಸೇರಿ ಕರ್ನಾಟಕದಲ್ಲಿ ರಸೆಲ್ಸ್ ವೈಪರ್ ಬೋನಸ್, ಕಾಮನ್ ಕ್ರೇಟ್ ಮನಾರ್, ನಾಗರಹಾವು, ಕಿಂಗ್ ಕೋಬ್ರಾ ಈ ನಾಲ್ಕು ಹಾವುಗಳು ಮಾತ್ರ ವಿಷಪೂರಿತ ಹಾವುಗಳು. ಇನ್ನುಳಿದ ಹಾವುಗಳು ಯಾವುದೇ ರೀತಿ ವಿಷ ಹೊಂದಿರುವುದಿಲ್ಲ. ಆದರೆ ವಿಷವಿಲ್ಲದ ಹಾವುಗಳು ಕಚ್ಚಿದಾಗ ಬಹಳಷ್ಟು ಜನ ಭಯಬಿದ್ದು ಸಾವನ್ನಪ್ಪುತ್ತಾರೆ. ಹೀಗಾಗಿ ಹಾವನ್ನು ಗುರುತಿಸಬೇಕು. ಹಾಗೇ ಹಾವಿಗೆ ನಾವು ಯಾವುದೇ ತೊಂದರೆ ಕೊಡದೇ ಇದ್ದರೆ ಅದು ಕೂಡ ಏನೂ ಮಾಡುವುದಿಲ್ಲ ಎಂದು ಉರಗಪ್ರೇಮಿ ರಾಮಾ ಪಾಟೀಲ ಹೇಳಿದರು.
ಇದನ್ನೂ ಓದಿ: Snake in Shoe: ಶೂ ಒಳಗೆ ಅವಿತು ಕುಳಿತಿದ್ದ ಮರಿ ನಾಗರ ಹಾವು ರಕ್ಷಣೆ.. ವಿಡಿಯೋ