ಚಿಕ್ಕೋಡಿ : ಕಳೆದ 2005 ಹಾಗೂ 2019-20 ರಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕೃಷ್ಣಾ ನದಿ ನೀರಿನ ಹರಿವಿನಲ್ಲಿ ಹೆಚ್ಚಳವಾಗಿ ಪ್ರವಾಹ ಪರಸ್ಥಿತಿ ಉಂಟಾಗಿದ್ದು, ಲಕ್ಷಾಂತರ ರೂಪಾಯಿ ನದಿ ತೀರದ ಜನರಿಗೆ ಹಾನಿಯಾಗಿತ್ತು. ಹಾನಿಗೊಳಗಾದ ನೆರೆ ಸಂತ್ರಸ್ತರಿಗೆ ಪರಿಹಾರ ಬಂದಿಲ್ಲ. ಅವುಗಳನ್ನು ಆದಷ್ಟು ಬೇಗ ಪರಿಹಾರ ನೀಡಬೇಕೆಂದು ವಿವಿಧ ಸಂಘಟನೆಗಳು ಚಿಕ್ಕೋಡಿ ತಹಶೀಲ್ದಾರ ಶುಭಾಸ ಸಂಪಗಾವಿ ಮೂಲಕ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಚಿಕ್ಕೋಡಿ ತಹಶೀಲ್ದಾರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಮಾಡಿದ ಬಳಿಕ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಿದ ವಿವಿಧ ಸಂಘಟನೆಗಳು, ಸರ್ಕಾರ ಕೊಟ್ಟಿರುವ ಪರಿಹಾರ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಈ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಕೊಟ್ಟ 10 ಸಾವಿರ ರೂಪಾಯಿ ಪರಿಹಾರ ಧನ ಮತ್ತು ಸಂಪೂರ್ಣ ಬಿದ್ದ ಮನೆಗಳ ಪರಿಹಾರ ಹಾಗೂ ಭಾಗಶಃ ಹಾನಿಗೆ ಒಳಗಾದ ಮನೆಗಳ ಪರಿಹಾರ ಸಮರ್ಪಕವಾಗಿ ಪೂರೈಕೆ ಆಗಿರುವುದಿಲ್ಲ. ಆದ್ದರಿಂದ ಸಮರ್ಪಕವಾಗಿ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.
ಪ್ರವಾಹ ಸಂತ್ರಸ್ತ ಕುಟುಂಬಗಳಿಗೆ ಕೂಡಲೇ ಧನ ಸಹಾಯ ಒದಗಿಸಬೇಕು. ಪ್ರವಾಹ ಸಂತ್ರಸ್ತರ ಮನೆ ನಿರ್ಮಾಣಕ್ಕಾಗಿ ಪರಿಹಾರ ವಿಳಂಬ ಮಾಡಬಾರದು. ಪ್ರವಾಹ ಸಂತ್ರಸ್ತರಿಗೆ ಹಂಚಿಕೆ ಮಾಡಿರುವ ನಿವೇಶನಗಳಲ್ಲಿ ಸರ್ಕಾರವೇ ಮನೆಗಳನ್ನು ನಿರ್ಮಿಸಿ ಹಕ್ಕು ಪತ್ರ ವಿತರಿಸಬೇಕು. ಯಾವ ಗ್ರಾಮಗಳು ಪ್ರವಾಹದಿಂದ ಹಾನಿಗೆ ಒಳಗಾಗಿ ಸಂಪೂರ್ಣ ಸ್ಥಳಾಂತರಕ್ಕೆ ಆಗ್ರಹಿಸುತ್ತಿವೆ ಅವರಿಗೆ ಭೂಮಿ ಗುರುತಿಸಿ ಗ್ರಾಮಗಳನ್ನು ಆದಷ್ಟು ಬೇಗ ಸ್ಥಳಾಂತರ ಮಾಡಬೇಕು. ಸರ್ಕಾರ ಭರವಸೆ ನೀಡಿದಂತೆ ಬಾಡಿಗೆ ಮನೆಗಳಲ್ಲಿ ವಾಸವಾಗಿರುವ ಸಂತ್ರಸ್ತ ಕುಟುಂಬಗಳಿಗೆ ತಿಂಗಳಿಗೆ 5000 ರೂಪಾಯಿಯಂತೆ ಧನ ಸಹಾಯ ಘೋಷಿಸಲಾಗಿದ್ದು ಬಾಕಿ ಉಳಿದವರಿಗೆ ಹಣ ಸಂದಾಯ ಮಾಡಬೇಕು ಎಂದು ಆಗ್ರಹಿಸಿದರು.