ಬೆಳಗಾವಿ: ಒಂದು ಪಕ್ಷ ಯಾರನ್ನಾದರೂ ಮುಖ್ಯಮಂತ್ರಿ ಮಾಡಬಹುದು, ಅವರು ಇವರು ಎನ್ನದೆ ಪಕ್ಷದ ತೀರ್ಮಾನ ಮಾಡುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ತಾರೀಹಾಳ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಬ್ರಾಹ್ಮಣರನ್ನು ಸಿಎಂ ಮಾಡುವ ಹುನ್ನಾರ ನಡೆಯುತ್ತಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಇಲ್ಲಿ ಯಾರೂ ಬೇಕಾದರೂ ಸಿಎಂ ಆಗಬಹುದು, ಅದು ಪಕ್ಷದ ತೀರ್ಮಾನ ಆಗಿರುತ್ತದೆ. ಇದು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಹಜವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಚಿಹ್ನೆಯಲ್ಲಿ ಬದಲಾವಣೆ ವಿಚಾರವಾಗಿ ಮಾತನಾಡಿ ಸತೀಶ್ ಜಾರಕಿಹೊಳಿ, ಅದರಲ್ಲಿ ಏನು ವಿಶೇಷವಿಲ್ಲ, ಒಂದೆರಡು ಗೆರೆ ಬಂದರೆ ಏನು ಬದಲಾವಣೆ ಆಗುವುದಿಲ್ಲ. ಕಾಂಗ್ರೆಸ್ ಗುರುತು ಯಾವತ್ತೂ ಹಸ್ತದ ಗುರುತು, ಇನ್ನೂ ಆರು ಗೆರೆ ಬಂದರೆ ಏನು, 7 ಗೆರೆ ಬಂದರೆ ಏನು ಕೈ ಕಾಂಗ್ರೆಸ್ ಪಕ್ಷದ್ದೇ, ಒಟ್ಟು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದರು.
ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ನಿಮ್ಮನ್ನು ವಿಪಕ್ಷಗಳು ಕಟ್ಟಿ ಹಾಕಲು ಪ್ರಯತ್ನಿಸುತ್ತಿವೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಇಲ್ಲಿ ಯಾರು ಯಾರನ್ನು ಟಾರ್ಗೆಟ್ ಮಾಡಲು ಸಾಧ್ಯವಿಲ್ಲ. ನಮ್ಮ ಜೊತೆಗೆ ನಮ್ಮ ಮತದಾರರು ಇದ್ದಾರೆ. ಬೆಳಗಾವಿ ಗ್ರಾಮೀಣ, ಯಮಕನಮರಡಿ, ಚಿಕ್ಕೋಡಿ ಇರಬಹುದು ಅಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಜನರ ವಿಶ್ವಾಸ ಶಾಸಕರ ಮೇಲಿದೆ. ನಮ್ಮ ಗೆಲುವಿಗೆ ಇದು ಸಹಕಾರಿ ಆಗಲಿದೆ. ಜನ ನಮ್ಮ ಕೆಲಸ ನೋಡುತ್ತಾರೆ ಟೀಕೆ, ಟಿಪ್ಪಣಿ ಬರ್ತಾವೆ ಹೋಗ್ತಾವೆ ಜನ ನಮ್ಮ ಪರವಾಗಿ ಗಟ್ಟಿಯಾಗಿ ಇದ್ದಾಗ ಯಾರು ಏನು ಮಾಡಲು ಆಗಲ್ಲ ಎಂದು ಹೇಳಿದರು.
ಪ್ರಜಾಧ್ವನಿ ಬಸ್ ಯಾತ್ರೆ ಪಂಕ್ಚರ್ ಆಗಿದೆ ಎಂದಿರುವ ಬಿಜೆಪಿ ನಾಯಕರ ಮಾತಿಗೆ, ಬಸ್ ಓಡಾಡುತ್ತಿವೆ ನಿಲ್ಲುಸುವ ಪ್ರಶ್ನೆ ಇಲ್ಲ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತ್ಯೇಕ ಬಸ್ ಯಾತ್ರೆಯಲ್ಲಿ ನೂರಕ್ಕೂ ಹೆಚ್ಚು ಕ್ಷೇತ್ರ ಕವರ್ ಮಾಡಬೇಕಿದೆ. ಇದರಿಂದ ಉಭಯ ನಾಯಕರು ಪ್ರತ್ಯೇಕವಾಗಿ ಯಾತ್ರೆ ಮಾಡುತ್ತಿದ್ದಾರೆ. ಒಬ್ಬೊಬ್ಬರಾಗಿ ಸಂಚಾರ ಬೆಳೆಸಿ ನೂರು ಕ್ಷೇತ್ರಕ್ಕೆ ಭೇಟಿ ನೀಡಬೇಕಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಕೈಗೊಂಡಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಡಿ ಕೆ ಶಿವಕುಮಾರ್ ತುಂಬಾ ದೈವ ಭಕ್ತರು: ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ದೈವ ಭಕ್ತರು, ಸಾರ್ವತ್ರಿಕ ಚುನಾವಣೆಯಲ್ಲಿ 136 ಶಾಸಕರ ಸ್ಥಾನ ಬರುತ್ತವೆ ಎಂದು ಹೇಳಿದ್ದಾರೆ. ಅವರು ದೈವ ಭಕ್ತರು ಆಗಿರುವುದರಿಂದ ಅಷ್ಟು ನಿಖರವಾಗಿ ಹೇಳುತ್ತಾರೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ಹಸ್ತದ ಚಿಹ್ನೆಯಲ್ಲಿ ಬದಲಾವಣೆ ತಂದಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಏನು ಬದಲಾವಣೆ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಅಧ್ಯಕ್ಷರು ದೈವ ಭಕ್ತರು ಆಗಿರುವುದರಿಂದ ಬದಲಾವಣೆ ಮಾಡಿರಬಹುದು ಎಂದರು.
ನಂತರ ಮಾತನಾಡಿ, ಚುನಾವಣೆ ಒಂದು ದಿಕ್ಕಿನಿಂದ ಹೋಗಬಾರದು, ಚುನಾವಣೆ ಅಂದರೆ ಸವಾಲಾಗಿ ಇರಬೇಕು, ಬೆಳಗಾವಿ ಗ್ರಾಮೀಣ ಭಾಗದಲ್ಲಿ ಎದುರಾಳಿ ಅಭ್ಯರ್ಥಿ ಯಾರು ಎಂಬುದು ಗೊಂದಲ ಮೂಡಿದೆ. ಇದರಿಂದಾಗಿ ಕಾರ್ಯಕರ್ತರು ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಎದುರಿಸುತ್ತಾರೆ. ನಮ್ಮ ಕಾರ್ಯಕರ್ತರನ್ನು ಬಡಿದೇಳಿಸುವ ಕಾರ್ಯವನ್ನು ಎದುರಾಳಿಗಳು ಮಾಡುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ವಿಧಾನಸೌಧದ ಪ್ರತಿ ಗೋಡೆಯೂ ಕಾಸು ಕಾಸೆನ್ನುತ್ತಿದೆ: ಡಿಕೆಶಿ