ಬೆಳಗಾವಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿರುವ ಜನಸೇವಕ ಸಮಾವೇಶದ ಸಮಾರೋಪ ಸಮಾರಂಭಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಬಿಜೆಪಿಯಿಂದ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆದರೆ, ಜನಸೇವಕ ಕಾರ್ಯಕ್ರಮದಲ್ಲಿ ಸಚಿವ ರಮೇಶ್ ಜಾರಕಿಹೊಳಿ ಅಳಿಯ ದರ್ಬಾರ್ ನಡೆಸುತ್ತಿದ್ದಾರೆ ಎಂಬ ಪ್ರಶ್ನೆ ಬಿಜೆಪಿ ಕಾರ್ಯಕರ್ತರಲ್ಲಿ ಮೂಡಿದೆ.
ಕಾರ್ಯಕ್ರಮದಲ್ಲಿ ಮೂರರಿಂದ ನಾಲ್ಕು ಲಕ್ಷ ಜನ ಸೇರಿಸುವುದಾಗಿ ಬಿಜೆಪಿ ಮುಖಂಡರು ಹೇಳಿಕೊಂಡಿದ್ದರು. ಆದ್ರೆ ಈವರೆಗೂ ಕಾರ್ಯಕ್ರಮ ನಡೆಯುವ ಸ್ಥಳಕ್ಕಾಗಲಿ ಅಥವಾ ಸಿದ್ಧತೆ ಪರಿಶೀಲನೆ ಮಾಡುವುದಾಗಿ ಮಾಡಿಲ್ಲ. ಅದಕ್ಕೆ ಕಾರಣ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅಳಿಯ ಅಂಬಿರಾವ್ ಪಾಟೀಲ್.
ಅಂಬಿರಾವ್ ಪಾಟೀಲ್ ಅವರಿಗೆ ಜನಸೇವಕ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದಾರೆ ಎನ್ನಲಾಗಿದ್ದು, ಹೀಗಾಗಿ ಅವರು ಕಾರ್ಯಕ್ರಮದ ಕೊನೆಯ ಹಂತದ ಸಿದ್ದತೆ ಪರಿಶೀಲನೆ ನಡೆಸುತ್ತಿದ್ದಾರೆ. ಜನಸೇವಕ ಕಾರ್ಯಕ್ರಮದ ಮುಖ್ಯ ವೇದಿಕೆ ಮೇಲೆ ನಿಂತು ಪ್ರತಿಯೊಬ್ಬರಿಗೂ ಕರೆ ಮಾಡಿ ಕೆಲಸದ ಕುರಿತು ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಪುತ್ರ ಅಮರನಾಥ ಜಾರಕಿಹೊಳಿ ಕೂಡ ಸಾಥ್ ನೀಡಿದ್ದಾರೆ.
ಇನ್ನು ಅವರ ಕೈಯಲ್ಲಿ ಉಸ್ತುವಾರಿ ವಹಿಸಿದ ಹಿನ್ನೆಲೆ ಕಾರ್ಯಕ್ರಮ ನಡೆಯುವ ಸ್ಥಳದತ್ತ, ಯಾವೊಬ್ಬ ಬಿಜೆಪಿ ಮುಖಂಡರು ಬಂದಿಲ್ಲ. ಕೊನೆಯ ಹಂತದ ಸಿದ್ಧತೆ ಪರಿಶೀಲನೆ ಮಾಡಲು ಬರಬೇಕಿದ್ದ ಮೂಲ ಬಿಜೆಪಿಗರು, ಅಂಬಿರಾವ್ ದರ್ಬಾರ್ಗೆ ಶಾಕ್ ಆಗಿದ್ದಾರೆ ಎನ್ನಲಾಗಿದೆ..