ಬೆಳಗಾವಿ: ಹೊರ ರಾಜ್ಯದಿಂದ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಟ್ರಾಫಿಕ್ ಪೊಲೀಸರು ತಪಾಸಣೆ ನೆಪವೊಡ್ಡಿ ಕಿರುಕುಳ ನೀಡುತ್ತಿದ್ದಾರೆಂದು ಶಾಸಕ ಅಭಯ ಪಾಟೀಲ ಆರೋಪಿಸಿ, ಪೊಲೀಸರ ವರ್ತನೆ ಖಂಡಿಸಿದ್ದಾರೆ.
ಶಾಸಕ ಅಭಯ್ ಪಾಟೀಲ್ ಸೆಲ್ಫಿ ವೀಡಿಯೋ ಮಾಡಿ ಪೊಲೀಸರ ವರ್ತನೆಗೆ ಖಂಡನೆ ವ್ಯಕ್ತಪಡಿಸಿದರು. ತಪಾಸಣೆ ನೆಪದಲ್ಲಿ ಟ್ರಾಫಿಕ್ ಪೊಲೀಸರು ಹೊರ ರಾಜ್ಯದ ಪ್ರವಾಸಿಗರಿಗೆ ನೀಡುತ್ತಿರುವ ಕಿರುಕುಳವನ್ನು ತಕ್ಷಣ ನಿಲ್ಲಿಸದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಮೊದಲೇ ಬೆಳಗಾವಿಯಲ್ಲಿ ಕೊರೊನಾ, ಪ್ರವಾಹಗಳಿಂದಾಗಿ ವ್ಯಾಪಾರ ವಹಿವಾಟು ಬಂದ್ ಆಗಿದೆ. ಈಗ ಗೋವಾ ಸೇರಿದಂತೆ ಹೊರ ರಾಜ್ಯಗಳಿಂದ ಇಲ್ಲಿಗೆ ಪ್ರವಾಸಿಗರು ಬರುವುದಕ್ಕೂ ಅಡ್ಡಿ ಪಡಿಸಿದರೆ ಪರಿಣಾಮ ಗಂಭೀರವಾಗಲಿದೆ. ಹಾಗಾಗಿ ತಕ್ಷಣ ಕಿರುಕುಳ ನಿಲ್ಲಿಸಬೇಕು ಎಂದಿದ್ದಾರೆ.
ವಾಹನ ತಪಾಸಣೆ ನೆಪದಲ್ಲಿ ಪ್ರವಾಸಿಗರಿಗೆ ಕಿರುಕುಳ ನೀಡಲಾಗುತ್ತಿದೆ ಎನ್ನುವ ದೂರು ಜನಸಾಮಾನ್ಯರಿಂದ, ವ್ಯಾಪಾರಸ್ಥರಿಂದ ಹಾಗೂ ಗೋವಾ ಸಚಿವರಿಂದ ಕೂಡ ಬಂದಿದೆ. ಈ ಬಗ್ಗೆ ಪೊಲೀಸ್ ಕಮಿಷನರ್ ಜೊತೆ ಮಾತನಾಡಿದ್ದೇನೆ. ತಪಾಸಣೆ ಮಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಕಿರುಕುಳ ನೀಡಿದರೆ ಪ್ರವಾಸಿಗರು ಬರುವುದನ್ನೇ ನಿಲ್ಲಿಸುತ್ತಾರೆ. ಇದರಿಂದ ಇಲ್ಲಿನ ವ್ಯಾಪಾರ ವಹಿವಾಟಿಗೆ ಮತ್ತಷ್ಟು ಹೊಡೆತ ಬೀಳಲಿದೆ ಎಂದು ಅಭಯ ಪಾಟೀಲ ಹೇಳಿದ್ದಾರೆ.
ಇದರ ಜೊತೆಗೆ ಕರ್ನಾಟಕದ ವಾಹನಗಳಿಗೆ ಮಹಾರಾಷ್ಟ್ರ ಮತ್ತು ಗೋವಾ ಗಡಿಯಲ್ಲಿ ಕಿರುಕುಳ ನೀಡುವುದಕ್ಕೂ ಕಡಿವಾಣ ಹಾಕಬೇಕಿದೆ. ಈ ಬಗ್ಗೆ ಮೂರೂ ರಾಜ್ಯಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಕುಳಿತು ಚರ್ಚೆ ನಡೆಸಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.