ಬೈಲಹೊಂಗಲ: ರೈತ ಸಂಪರ್ಕ ಕೇಂದ್ರಗಳನ್ನು ಸದಾ ಕಾಲ ತೆರೆದಿರಬೇಕು. ಸರ್ಕಾರದ ಸವಲತ್ತುಗಳಿಂದ ಯಾವ ರೈತರೂ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಲೂಕಿನ ನೇಸರಗಿ ಗ್ರಾಮದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕೋವಿಡ್-19 ರೋಗ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದೆ. ಆದರೆ, ರೈತರಿಗೆ ಸಿಗಬೇಕಾದ ಬೀಜ, ರಸಗೊಬ್ಬರ, ಮತ್ತಿತರೆ ಪರಿಕರಗಳು ಕೃಷಿ ಇಲಾಖೆಯಿಂದ ಸಕಾಲದಲ್ಲಿ ಸಿಗುವಂತೆ ನೋಡಿಕೊಳ್ಳಬೇಕು. ಯಂತ್ರೋಪಕರಣ ಅಥವಾ ಬೇರೆ ಸಮಸ್ಯೆಗಳಿಂದ ಉಳುಮೆಗೆ ತೊಂದರೆಯಾಗಿ ಕೃಷಿ ಚಟುವಟಿಕೆ ನಿಲ್ಲಬಾರದು. ಬೀಜ ವಿತರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ಕಿತ್ತೂರು ತಾಲೂಕಿಗೆ ಸಹಾಯಕ ಕೃಷಿ ನಿರ್ದೇಶಕರ ಹುದ್ದೆಗೆ ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ. ಹುದ್ದೆಯನ್ನು ಸೃಷ್ಟಿಸಿದಲ್ಲಿ ಅನುಕೂಲವಾಗುತ್ತದೆ. ಕೃಷಿ ಇಲಾಖೆಯಲ್ಲಿ ರಾಜ್ಯಾದ್ಯಂತ ದಿನದ ಸಿಬ್ಬಂದಿ ಕೊರತೆ ಇದೆ. ಅದನ್ನು ಶೀಘ್ರ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.