ಚಿಕ್ಕೋಡಿ: ಕೊರೊನಾ ಹಿನ್ನೆಲೆಯಲ್ಲಿ ಕಳೆದ 18 ತಿಂಗಳಿಂದ ಗಡಿನಾಡ ಶಕ್ತಿ ದೇವತೆ ಮಾಯಕ್ಕಾದೇವಿ ದೇವಾಲಯ ಬಂದ್ ಮಾಡಲಾಗಿದ್ದು, ದೇವಾಲಯದ ಅಕ್ಕಪಕ್ಕದ ಅಂಗಡಿಗಳ ವ್ಯಾಪಾರಸ್ಥರು ದುಡಿದೆ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ಐತಿಹಾಸಿಕ ಪ್ರಸಿದ್ಧ ಮಾಯಕ್ಕಾದೇವಿ ದೇವಸ್ಥಾನವನ್ನು ಸರ್ಕಾರದ ಕೊರೊನಾ ಮಾರ್ಗಸೂಚಿ ಅನ್ವಯ ಕಳೆದ 18 ತಿಂಗಳಿಂದ ಮುಚ್ಚಲಾಗಿದೆ. ದೇವಸ್ಥಾನ ಬಂದ್ ಮಾಡಿರುವುದರಿಂದ ಅಪಾರ ಪ್ರಮಾಣದ ಭಕ್ತರು ದೇವಾಲಯದ ಹೊರಗಡೆ ಇರುವ ದ್ವಾರ ಬಾಗಿಲಿಗೆ ನಮಸ್ಕರಿಸಿ ಹೋಗುತ್ತಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶ, ತಮಿಳುನಾಡು, ಗೋವಾ ಮೊದಲಾದ ರಾಜ್ಯಗಳಿಂದ ಅಸಂಖ್ಯಾತ ಭಕ್ತರು ಇಲ್ಲಿಗೆ ಆಗಮಿಸುತಿದ್ದರು. ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಿಲ್ಲ. ಆದರೆ ದೇವರಿಗೆ ದಿನನಿತ್ಯ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತಿದೆ. ಪರಿಣಾಮ ದೇವಾಲಯದ ಅಕ್ಕಪಕ್ಕದ ಅಂಗಡಿಗಳ ವ್ಯಾಪಾರಸ್ಥರು ದುಡಿಮೆ ಇಲ್ಲದೆ ಜೀವನ ನಡೆಸುವುದು ಕಷ್ಟಸಾಧ್ಯವಾಗಿದೆ. ಸರ್ಕಾರ ಕೂಡಲೇ ದೇವಸ್ಥಾನ ತೆರೆಯುವಂತೆ ಆದೇಶ ನೀಡಬೇಕು, ಇಲ್ಲವಾದ್ರೆ ನಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ವ್ಯಾಪಾರಸ್ಥರು ಒತ್ತಾಯಿಸಿದ್ದಾರೆ.