ಚಿಕ್ಕೋಡಿ(ಬೆಳಗಾವಿ): ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೌಲಗುಡ್ಡ ಗ್ರಾಮದಲ್ಲಿ ನಡೆದಿದೆ.
ಕೌಲಗುಡ್ಡ ಗ್ರಾಮದ ಜಗದೀಶ್ ಸುರೇಶ ತೆಗ್ಗಿನವರ (27) ಮೃತ ವ್ಯಕ್ತಿ. ಅಂಗಡಿ ಬಾಗಿಲು ಹಾಕದ ಹಿನ್ನೆಲೆ, ಕಾಗವಾಡ ಪೋಲಿಸರಿಂದ ಏಟು ತಿಂದ ಈತ ಮೂರ್ಛೆ ಬಿದ್ದಿದ್ದ. ತಕ್ಷಣವೇ ಸ್ಥಳೀಯರು ಅಥಣಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದುದಿದ್ದು, ಈ ವೇಳೆ ಮಾರ್ಗ ಮಧ್ಯದಲ್ಲಿಯೇ ಸಾವಿಗೀಡಾಗಿದ್ದಾನೆ ಎನ್ನಲಾಗಿದೆ.
ಕಾಗವಾಡ ಪೊಲೀಸ್ ಠಾಣೆ ಪೇದೆ ಬಸವರಾಜ ಲಟ್ಟಿ,ಯುವಕನ ಮೇಲೆ ಹಲ್ಲೆ ಮಾಡಿರುವ ಆರೋಪ ಸ್ಥಳೀಯರಿಂದ ಕೇಳಿಬರುತ್ತಿದ್ದು, ಪೇದೆ ಬಸವರಾಜ ಅವರನ್ನ ತಕ್ಷಣ ಅಮಾನತು ಮಾಡಬೇಕು ಹಾಗೂ ಅವರನ್ನು ಬಂಧಿಸುವವರೆಗೂ ಮೃತದೇಹದ ಮರಣೋತ್ತರ ಪರೀಕ್ಷೆಗೆ ಬಿಡುವುದಿಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದಿದ್ದರು.
ನಂತರ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ, ಕುಟುಂಬಸ್ಥರ ಹಾಗೂ ಸ್ಥಳೀಯರ ಮನವೊಲಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಇನ್ನು, ಜಗದೀಶ್ ಇದೇ ತಿಂಗಳು 8ನೇ ತಾರೀಖಿನಂದು ಪ್ರೇಮ ವಿವಾಹವಾಗಿದ್ದು,ಈತನ ಸಾವಿನ ಸುದ್ದಿ ಕೇಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.