ಬೆಳಗಾವಿ : ಮಹಾದೇವಿ ಎಂಬ ಯುವತಿಯನ್ನು ಪುನ್ರಾನಂದ ಸಣ್ಣಪ್ಪನವರ್ ಎಂಬಾತ ಎಂಟು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆದ್ರೀಗ ಮೂರು ಮಕ್ಕಳಾದ ಬಳಿಕ ಹೇಳದೇ ಕೇಳದೆ ಬಿಟ್ಟು ಹೋಗಿದ್ದಾರೆ. ಇದೀಗ ಮಹಾದೇವಿ ಮೂರು ಮಕ್ಕಳನ್ನು ಕಟ್ಟಿಕೊಂಡು ಬೆಳಗಾವಿ ತಾಲೂಕಿನ ಕಾಕತಿ ಹೊರವಲಯದಲ್ಲಿದ್ದಾರೆ. ಖಾನಾಪುರ ತಾಲೂಕಿನ ದೇಮನಕಟ್ಟಿ ಎಂಬ ಗ್ರಾಮದ ಮಹಾದೇವಿ ಈಗ ಮುಂದೇನು ಎಂಬ ಚಿಂತೆಯಲ್ಲಿದ್ದಾರೆ.
ಗಂಡನಿಂದ ಕಿರುಕುಳ : ಮಹಾದೇವಿ, ಪುನ್ರಾನಂದನ ಪ್ರೀತಿಯಲ್ಲಿ ಬಿದ್ದ ಬಳಿಕ ಆತನನ್ನು ನಂಬಿ ಮನೆಬಿಟ್ಟು ಬಂದಿದ್ದಾರೆ. ಅಲ್ಲದೇ ಏಂಟು ವರ್ಷದ ಹಿಂದೆ ರಿಜಿಸ್ಟರ್ ಮದುವೆಯಾಗ್ತಾರೆ. ಇದಾದ ಬಳಿಕ ಕೆಲವು ಕಡೆಗಳಲ್ಲಿ ಕೆಲಸ ಮಾಡ್ತಾ ಕೊನೆಯಲ್ಲಿ ಕಾಕತಿ ಗ್ರಾಮದಲ್ಲಿ ಮನೆಯೊಂದನ್ನ ಬಾಡಿಗೆ ಪಡೆದು ವಾಸಿಸುತ್ತಿರುತ್ತಾರೆ.
ಈ ಪುನ್ರಾನಂದ ಕುಡಿದು ಬಂದು ಈಕೆಯನ್ನ ಹೊಡೆಯುವುದನ್ನ ಮಾಡುವುದಷ್ಟೇ ಅಲ್ಲದೇ ಈಕೆ ನಾಲ್ಕನೇ ಮಗುವಿಗೆ ಗರ್ಭಿಣಿಯಾಗಿದ್ದಾಗ ಕೊಲೆ ಮಾಡುವುದಾಗಿ ಧಮ್ಕಿ ಹಾಕಿದ್ದಾನಂತೆ. ಗಂಡನ ಕಿರುಕುಳಕ್ಕೆ ಹೆದರಿ ಮನೆ ಬಿಟ್ಟ ಈಕೆ ಕಾಕತಿ ಗ್ರಾಮದ ಹೊರವಲಯದಲ್ಲೇ ಮರದ ಕೆಳಗೆ ಜಾಗ ಮಾಡಿಕೊಂಡು ಮೂರು ಮಕ್ಕಳನ್ನ ಕಟ್ಟಿಕೊಂಡು ಎರಡು ದಿನಗಳ ಕಾಲ ಅಲ್ಲೇ ಜೀವನ ಮಾಡಿದ್ದಾರೆ.
ಮಹಾದೇವಿ ಮುಳ್ಳಿನ ಕಂಟೆಯಲ್ಲಿ ಬದುಕುತ್ತಿರುವುದನ್ನ ಗಮನಿಸಿದ ಗ್ರಾಮಸ್ಥರು, ಕೂಡಲೇ ಸ್ಥಳೀಯ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಆರೋಗ್ಯ ಇಲಾಖೆ ಶುಶ್ರೂಕಿಯರು ಹಾಗೂ ಗ್ರಾಮ ಪಂಚಾಯತ್ ಸದಸ್ಯ ಗಜಾನನ ಗವಾನೆ ಎಂಬುವರು ಕೂಡಲೇ ಈಕೆಯನ್ನ ಅಲ್ಲಿಂದ ಹೊರ ಕರೆದುಕೊಂಡು ಬಂದಿದ್ದಾರೆ. ಮರದ ಕೆಳಗೆ ಇದ್ದ ಸಾಮಾಗ್ರಿಗಳನ್ನ ಎತ್ತಿಕೊಂಡು ಬಂದು ಅಲ್ಲೇ ಸಮೀಪದಲ್ಲೇ ಅರಣ್ಯ ಇಲಾಖೆಗೆ ಸೇರಿದ ಪಾಳು ಬಿದ್ದ ಮನೆಗೆ ಶಿಫ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಆಸ್ತಿ ಬರೆದು ಕೊಡುವಂತೆ ಧಮ್ಕಿ: ಶಾಸಕರ ವಿರುದ್ಧ ದಂಪತಿ ಆರೋಪ
ನಾಲ್ಕು ತಿಂಗಳ ಗರ್ಭಿಣಿಯಾಗಿರುವ ಮಹಾದೇವಿಗೆ ಇದೀಗ ಗಜಾನನ ಅವರು ಆಹಾರ ಸೇರಿದಂತೆ ಮಕ್ಕಳಿಗೆ ಬಿಸ್ಕತ್ ಹಾಗೂ ಬಟ್ಟೆಗಳನ್ನ ನೀಡಿ ಇರಲು ವ್ಯವಸ್ಥೆ ಮಾಡಿದ್ದಾರೆ. ಇತ್ತ ಮಹಾದೇವಿ ಮನೆ ಬಿಟ್ಟು ಹೊರ ಬಂದಾಗಿನಿಂದ ಗಂಡ ಪುನ್ರಾನಂದ ಊರು ಬಿಟ್ಟಿದ್ದು, ಆತನನ್ನ ಸ್ಥಳೀಯರು ಹುಡುಕುವುದರ ಜತೆಗೆ ಸ್ಥಳೀಯ ಪೊಲೀಸ್ ಠಾಣೆಯವರಿಗೂ ಮಾಹಿತಿ ನೀಡಿದ್ದಾರೆ. ಇದೀಗ ಮೂರು ಮಕ್ಕಳನ್ನ ಕಟ್ಟಿಕೊಂಡ ಗರ್ಭಿಣಿ ಮಹಾದೇವಿಗೆ ಸಾರ್ವಜನಿಕರೇ ಆಸರೆಯಾಗಿದ್ದಾರೆ.