ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿದ್ದವರ ವಿರುದ್ಧ ಬೆಳಗಾವಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ 'ಬ್ರಾಹ್ಮಣವಾದ' ರಾಮ ಮಂದಿರ ಹೋರಾಟದಲ್ಲಿ ಸತ್ತ ಹೆಚ್ಚಿನವರು ಒಬಿಸಿಗಳು, ಒಬ್ಬನೇ ಒಬ್ಬ ಬ್ರಾಹ್ಮಣ ಸಾಯಲಿಲ್ಲ. ಆದರೆ, ಈಗ ಮಂದಿರದ ಟ್ರಸ್ಟ್‌ನ ಪದಾಧಿಕಾರಿಗಳೆಲ್ಲ ಬ್ರಾಹ್ಮಣರು, ಒಬ್ಬನು ಒಬಿಸಿ ಇಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಇದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಹೆಸರನ್ನು ಕೆಡಿಸುವ ಹುನ್ನಾರ ಮಾಡಲಾಗುತ್ತಿದೆ. ಈ ಪೋಸ್ಟ್ ಮಾಡಿದವರ ಕುರಿತು ಸೂಕ್ತ ತನಿಖೆ ನಡೆಸಬೇಕು ಅಂತಾ ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ರಾಜ್ಯಾಧ್ಯಕ್ಷ ವಿಜಯ ಬಸಪ್ಪ ತಳವಾರ ಬೆಳಗಾವಿ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಮಾಜ ಸೇವಕನಾಗಿರುವ ನಾನು ಕಳೆದ ೧೦ ವರ್ಷಗಳಿಂದ ಸತೀಶ ಜಾರಕಿಹೊಳಿ ಅವರ ಜೊತೆಗೆ ಒಡನಾಟ ಹೊಂದಿದ್ದೇನೆ. ಸತೀಶ ಜಾರಕಿಹೊಳಿ ಅವರ ಹೆಸರನ್ನು ಕೆಡಿಸುವ ದುರುದ್ದೇಶದಿಂದ ಸಾಮಾಜಿಕ ಜಾಲತಾಣಗಳಾದ ವಾಟ್ಸ್ಆ್ಯಪ್, ಫೇಸಬುಕ್‌ನಲ್ಲಿ ಕಿಡಿಗೇಡಿಗಳು ಸತೀಶ ಜಾರಕಿಹೊಳಿ ಅವರ ಹೆಸರಿನಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ಹರಿಬಿಡುತ್ತಿದ್ದಾರೆ. ಇಂತಹ ಕಿಡಿಗೇಡಿಗಳ ವಿರುದ್ಧ ತನಿಖೆ ನಡೆಸಿ, ಅಂತಹವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಅತಿವೃಷ್ಟಿ ಬಗ್ಗೆ ಸರ್ಕಾರಕ್ಕೆ ಗಂಭೀರತೆ ಇಲ್ಲವೆಂದರೆ ಚರ್ಚೆ ಯಾಕೆ? : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗರಂ