ಬೆಳಗಾವಿ: ಉಕ್ರೇನ್‌ನ ಕಾರ್ಕಿವ್ ನ್ಯಾಷನಲ್ ಮೆಡಿಕಲ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಗಡಿ ಜಿಲ್ಲೆ ಬೆಳಗಾವಿಯ ಏಳು ವೈದ್ಯಕೀಯ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿದ್ದು, ತಾವು ವಾಸವಿದ್ದ ಹಾಸ್ಟೆಲ್‌ನ ನೆಲಮಹಡಿ, ಬಂಕರ್‌ಗಳಲ್ಲಿ ರಕ್ಷಣೆ ಪಡೆದಿದ್ದಾರೆ.
ಬೆಳಗಾವಿ ಜಿಲ್ಲೆಯ ಪ್ರಿಯಾ ಚಬ್ಬಿ, ಪ್ರೀತಿ ಚಬ್ಬಿ, ಶ್ರೇಯಾ ಹೆರಕಲ್,ಅಮೋಘ ಚೌಗಲಾ, ಪ್ರಿಯಾ ನಿಡಗುಂದಿ, ರಕ್ಷಿತ್ ಗಣಿ, ಅಫ್ರೀನ್ ಮದರಸಾಬ್ ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳು.
ವಿದ್ಯಾರ್ಥಿಗಳ ಪೋಷಕರ ಜೊತೆಗೆ ಬೆಳಗಾವಿ ಜಿಲ್ಲಾಡಳಿತ ಸಂಪರ್ಕದಲ್ಲಿದೆ. ಸದ್ಯಕ್ಕೆ ಇಬ್ಬರು ವಿದ್ಯಾರ್ಥಿನಿಯರ ಪೋಷಕರ ಜೊತೆ ಬೆಳಗಾವಿ ಡಿಸಿ ಮಾತುಕತೆ ನಡೆಸಿದ್ದಾರೆ. ಉಳಿದ ವಿದ್ಯಾರ್ಥಿಗಳ ಬಗ್ಗೆಯೂ ಜಿಲ್ಲಾಡಳಿತ ಮಾಹಿತಿ ಕಲೆ ಹಾಕುತ್ತಿದೆ.
ನೆಲಮಹಡಿ, ಬಂಕರ್‌ಗಳಲ್ಲೇ ವಿದ್ಯಾರ್ಥಿಗಳು ಮೊಬೈಲ್ ಚಾರ್ಜ್ ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳ ಸ್ಥಿತಿ ಕಂಡು ಪೋಷಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಉಕ್ರೇನ್‌ನಲ್ಲಿ ಸಿಲುಕಿದ ಉಡುಪಿ ವಿದ್ಯಾರ್ಥಿ: ಉಡುಪಿಯ ರೋಹನ್ ಧನಂಜಯ್ ಬಗ್ಲಿ ಅವರು ಉಕ್ರೇನ್‌ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದು, ಉಕ್ರೇನ್‌ನಲ್ಲಿ ಸಿಲುಕಿದ್ದಾರೆ ಎಂದು ಅವರ ತಂದೆ ಡಾ.ಧನಂಜಯ್ ಬಗ್ಲಿ ಮಾಧ್ಯಮಕ್ಕೆ ತಿಳಿಸಿದರು.
ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಧನಂಜಯ್ ಬಗ್ಲಿ ಅವರ ಹಿರಿಯ ಮಗ ರೋಹನ್ ಉಕ್ರೇನ್‌ನ ಕಾರ್ಕಿವ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ 5ನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ.
ನಿನ್ನೆ ಯುದ್ದ ಆರಂಭವಾಗಿರುವ ಕುರಿತು ತಿಳಿಸಿದ್ದ. ಅವನ ಜೊತೆಗೆ ಇದ್ದವರನ್ನು ಸೇಫ್ ಬಂಕರ್ಸ್ಗೆ ಸ್ಥಳಾಂತರ ಮಾಡಿದ್ದಾರೆ. ಸದ್ಯಕ್ಕೆ ಅವರಿಗೆಲ್ಲಾ ಯಾವುದೇ ತೊಂದರೆ ಇಲ್ಲ. ಕೂಡಲೇ ಸರ್ಕಾರ ದೇಶದ ಜೊತೆ ಸಂಪರ್ಕ ಮಾಡಿಕೊಂಡು ಎಲ್ಲರನ್ನು ಕರೆತರುವ ಕೆಲಸ ಮಾಡಬೇಕು ಎಂದು ಡಾ.ಧನಂಜಯ್ ಮನವಿ ಮಾಡಿದರು.